ಆಶಸ್ ಸರಣಿಯ ಅಂತಿಮ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್, ಇತಿಹಾಸ ನಿರ್ಮಿಸಿದ್ದಾರೆ. ಅವರು ಇಂಗ್ಲೆಂಡ್‌ನ ಜಾಕ್ ಹಾಬ್ಸ್‌ರನ್ನು ಹಿಂದಿಕ್ಕಿ, ಆಶಸ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಈ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.

ಸಿಡ್ನಿ: ಆಶಸ್ ಟೆಸ್ಟ್‌ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಜತೆಗೆ ಆಶಸ್ ಟೆಸ್ಟ್‌ನಲ್ಲಿ ಹೊಸ ಮೈಲಿಗಲ್ಲು ನೆಡುವಲ್ಲಿ ಸ್ಮಿತ್ ಯಶಸ್ವಿಯಾಗಿದ್ದಾರೆ. ಸ್ಟೀವ್ ಸ್ಮಿತ್ ಇದೀಗ ಆಶಸ್ ಟೆಸ್ಟ್‌ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಸ್ಮಿತ್ ಆಸ್ಟ್ರೇಲಿಯಾ ಪರ ಆಶಸ್ ಟೆಸ್ಟ್‌ ಸರಣಿಯಲ್ಲಿ ಒಟ್ಟು 41 ಪಂದ್ಯಗಳ 73 ಇನ್ನಿಂಗ್ಸ್‌ಗಳನ್ನಾಡಿ 56.93ರ ಬ್ಯಾಟಿಂಗ್ ಸರಾಸರಿಯಲ್ಲಿ 13 ಶತಕ ಹಾಗೂ 15 ಅರ್ಧಶತಕ ಸಹಿತ 3644 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಜಾಕ್ ಹಾಬ್ಸ್‌(3636 ರನ್) ಹಿಂದಿಕ್ಕುವಲ್ಲಿ ಸ್ಮಿತ್ ಯಶಸ್ವಿಯಾಗಿದ್ದಾರೆ.

ಇನ್ನು ಆಶಸ್ ಟೆಸ್ಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಸರ್ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ಲೆಜೆಂಡ್ ಬ್ರಾಡ್‌ಮನ್, 37 ಆಶಸ್ ಟೆಸ್ಟ್‌ ಪಂದ್ಯದ 63 ಇನ್ನಿಂಗ್ಸ್‌ಗಳನ್ನಾಡಿ 89.78ರ ಬ್ಯಾಟಿಂಗ್ ಸರಾಸರಿಯಲ್ಲಿ 19 ಶತಕ ಹಾಗೂ 12 ಅರ್ಧಶತಕ ಸಹಿತ 5028 ರನ್ ಬಾರಿಸಿ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್, ಆಶಸ್ ಟೆಸ್ಟ್‌ ಸರಣಿಯಲ್ಲಿ 2822 ರನ್ ಸಿಡಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

Scroll to load tweet…

ಸಿಡ್ನಿ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಸ್ಟೀವ್ ಸ್ಮಿತ್

ಆಶಸ್ ಸರಣಿಯ ಐದನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬೆನ್ನಲ್ಲೇ ನಾಯಕ ಸ್ಟೀವ್ ಸ್ಮಿತ್ ಕೂಡ ಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಸ್ಕೋರ್ 384 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿದೆ. ಈ ಮೂಲಕ ಆಸೀಸ್ ತಂಡ 134 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಹೊಂದಿದೆ.

ನಾಯಕ ಸ್ಟೀವ್ ಸ್ಮಿತ್ 129 ರನ್ ಮತ್ತು ಬ್ಯೂ ವೆಬ್‌ಸ್ಟರ್ 42 ರನ್‌ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 166 ಎಸೆತಗಳಲ್ಲಿ 163 ರನ್ ಗಳಿಸಿ ಔಟಾಗಿದ್ದರು. ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸ್ ಮೂರು ಮತ್ತು ನಾಯಕ ಬೆನ್ ಸ್ಟೋಕ್ಸ್ ಎರಡು ವಿಕೆಟ್ ಪಡೆದರು.

Scroll to load tweet…

ಟೆಸ್ಟ್ ವೃತ್ತಿಜೀವನದ 37ನೇ ಶತಕ ಸಿಡಿಸಿ ದ್ರಾವಿಡ್ ದಾಖಲೆ ಮುರಿದ ಸ್ಮಿತ್:

ಸಿಡ್ನಿ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಸ್ಟೀವ್ ಸ್ಮಿತ್ 167 ಎಸೆತಗಳನ್ನು ಎದುರಿಸಿ ಆಕರ್ಷಕ ಶತಕ ಪೂರೈಸಿದರು. ಇದು ಸ್ಮಿತ್ ಅವರ ಟೆಸ್ಟ್ ವೃತ್ತಿಜೀವನದ 37ನೇ ಶತಕವಾಗಿದೆ. ಈ ಶತಕದೊಂದಿಗೆ, ಸ್ಮಿತ್ ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಭಾರತದ ರಾಹುಲ್ ದ್ರಾವಿಡ್ (36) ಅವರನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಏರಿದ್ದಾರೆ. ಆಶಸ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಎರಡನೇ ಆಸೀಸ್ ಆಟಗಾರ ಎಂಬ ದಾಖಲೆಯನ್ನು ಸ್ಮಿತ್ ತಮ್ಮದಾಗಿಸಿಕೊಂಡಿದ್ದಾರೆ. ಇದು ಆಶಸ್‌ನಲ್ಲಿ ಸ್ಮಿತ್ ಅವರ 13ನೇ ಶತಕವಾಗಿದೆ. 19 ಶತಕಗಳನ್ನು ಗಳಿಸಿರುವ ದಿಗ್ಗಜ ಡಾನ್ ಬ್ರಾಡ್ಮನ್ ಮಾತ್ರ ಸ್ಮಿತ್‌ಗಿಂತ ಮುಂದಿದ್ದಾರೆ. 12 ಶತಕಗಳನ್ನು ಗಳಿಸಿದ್ದ ಜ್ಯಾಕ್ ಹಾಬ್ಸ್ ಅವರನ್ನು ಸ್ಮಿತ್ ಇಂದು ಹಿಂದಿಕ್ಕಿದರು.

ಟ್ರಾವಿಸ್ ಹೆಡ್ ಹೊರತುಪಡಿಸಿ, ಮೈಕಲ್ ನೇಸರ್ (24), ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಉಸ್ಮಾನ್ ಖವಾಜಾ (17), ಅಲೆಕ್ಸ್ ಕ್ಯಾರಿ (16), ಮತ್ತು ಕ್ಯಾಮರೂನ್ ಗ್ರೀನ್ (37) ಅವರ ವಿಕೆಟ್‌ಗಳನ್ನು ಆಸೀಸ್ ಇಂದು ಕಳೆದುಕೊಂಡಿತು. ಆರಂಭಿಕ ಆಟಗಾರ ಜೇಕ್ ವೆದರಾಲ್ಡ್ (21) ಮತ್ತು ಮಾರ್ನಸ್ ಲಬುಶೇನ್ (48) ಅವರ ವಿಕೆಟ್‌ಗಳನ್ನು ಆಸೀಸ್ ಮೊದಲ ದಿನವೇ ಕಳೆದುಕೊಂಡಿತ್ತು. ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿರುವ ಆಸೀಸ್ ಈಗಾಗಲೇ ಸರಣಿಯನ್ನು ಗೆದ್ದುಕೊಂಡಿದೆ.