* ಶ್ರೀಲಂಕಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ರಾಜಕೀಯ ಅರಾಜಕತೆ* ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಆಯೋಜಿಸಲು ಚಿಂತನೆ* 2016ರಲ್ಲಿ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಗೆ ಬಾಂಗ್ಲಾದೇಶ ಆತಿಥ್ಯವನ್ನು ವಹಿಸಿತ್ತು.

ನವದೆಹಲಿ(ಜು.13): ಆಗಸ್ಟ್ 27ರಿಂದ ಆರಂಭಗೊಳ್ಳಬೇಕಿರುವ ಏಷ್ಯಾಕಪ್‌ ಟಿ20 ಟೂರ್ನಿಯನ್ನು ಶ್ರೀಲಂಕಾದಿಂದ ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಶ್ರೀಲಂಕಾದಲ್ಲಿ ರಾಜಕೀಯ ಅರಾಜಕತೆ, ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಗೆ ಆತಿಥ್ಯ ವಹಿಸಲು ಸಿದ್ಧವಿರುವಂತೆ ಬಾಂಗ್ಲಾ ಕ್ರಿಕೆಟ್‌ ಮಂಡಳಿ(ಬಿಸಿಬಿ)ಗೆ ಏಷ್ಯಾ ಕ್ರಿಕೆಟ್‌ ಸಮಿತಿ ಸೂಚಿಸಿದೆ. ಕೆಲ ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ಆಸ್ಪ್ರೇಲಿಯಾ-ಶ್ರೀಲಂಕಾ 2ನೇ ಟೆಸ್ಟ್‌ ವೇಳೆ ಗಾಲೆ ಕ್ರೀಡಾಂಗಣದ ಹೊರಗೂ ಸಾವಿರಾರು ಪ್ರತಿಭಟನಾಕಾರರು ನೆರೆದಿದ್ದರು. ಆ ದೃಶ್ಯಗಳು ಏಷ್ಯಾ ಕ್ರಿಕೆಟ್‌ ಸಮಿತಿಯ ಆತಂಕಕ್ಕೆ ಕಾರಣವಾಗಿದ್ದು, ಭದ್ರತೆ ಸಮಸ್ಯೆ ಎದುರಾಗಬಹುದು ಎನ್ನುವ ಕಾರಣಕ್ಕೆ ಟೂರ್ನಿಯನ್ನ ಸ್ಥಳಾಂತರಿಸಲು ಚಿಂತಿಸುತ್ತಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಅರಾಜಕತೆ ಸೃಷ್ಠಿಯಾಗಿರುವ ಹಿನ್ನೆಲೆಯಲ್ಲಿ ಏಷ್ಯಾ ಕ್ರಿಕೆಟ್‌ ಸಮಿತಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದವಿಲ್ಲ. ಹೀಗಾಗಿಯೇ ಶ್ರೀಲಂಕಾದಿಂದ ಏಷ್ಯಾಕಪ್ ಟಿ20 ಸರಣಿಯನ್ನು ಸ್ಥಳಾಂತರ ಮಾಡುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ. ಇನ್ನು 2016ರಲ್ಲಿ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಗೆ ಬಾಂಗ್ಲಾದೇಶ ಆತಿಥ್ಯವನ್ನು ವಹಿಸಿತ್ತು. 

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ಆಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಜತೆಗೆ ಏಷ್ಯಾದ ಯುಎಇ, ಕುವೈತ್, ಸಿಂಗಾಪುರ ಅಥವಾ ಹಾಂಕಾಂಗ್ ಈ ತಂಡಗಳ ಪೈಕಿ ಒಂದು ತಂಡ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದೆ. 

ವಿಶ್ವ ಟೆಸ್ಟ್‌: ಅಗ್ರಸ್ಥಾನ ಕಳೆದುಕೊಂಡ ಆಸೀಸ್‌

ಕೊಲಂಬೋ: ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಸೋಲನುಭವಿಸಿದ ಆಸ್ಪ್ರೇಲಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದು, ಶ್ರೀಲಂಕಾ 3ನೇ ಸ್ಥಾನ ಪಡೆದುಕೊಂಡಿದೆ. ಸದ್ಯ ದಕ್ಷಿಣ ಆಫ್ರಿಕಾ ಶೇ.71.43 ಗೆಲುವಿನ ಪ್ರತಿಶತದೊಂದಿಗೆ ನಂ.1 ಸ್ಥಾನದಲ್ಲಿದ್ದು, ಆಸೀಸ್‌ ಶೇ.70 ಜಯದ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಕಳೆದ ಬಾರಿ ಫೈನಲ್‌ ಪ್ರವೇಶಿಸಿದ್ದ ಭಾರತ ಈ ಬಾರಿ 12 ಪಂದ್ಯಗಳಲ್ಲಿ 6 ಜಯ, 4 ಸೋಲು, 2 ಡ್ರಾದೊಂದಿಗೆ ಒಟ್ಟು 75 ಅಂಕಗಳಿಸಿದ್ದು ಶೇ.52.08ರ ಗೆಲುವಿನ ಪ್ರತಿಶತದೊಂದಿಗೆ 5ನೇ ಸ್ಥಾನದಲ್ಲಿದೆ.

ಲಂಕಾದಲ್ಲಿ ಆರ್ಥಿಕ ಸಂಕಷ್ಟ: ಏಷ್ಯಾಕಪ್‌ ಸ್ಥಳಾಂತರ?

ಏಕದಿನ ರ‍್ಯಾಂಕಿಂಗ್‌: ಪ್ರಗತಿ ಸಾಧಿಸಿದ ಹರ್ಮನ್‌, ಸ್ಮೃತಿ

ದುಬೈ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂಧನಾ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್ 1 ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದರೆ, ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ 1 ಸ್ಥಾನ ಜಿಗಿದು 9ನೇ ಸ್ಥಾನ ತಲುಪಿದ್ದಾರೆ. ಶಫಾಲಿ ವರ್ಮಾ 33ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್‌ 3 ಸ್ಥಾನ ಮೇಲಕ್ಕೇರಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ವೇಗಿ ಜೂಲನ್‌ ಗೋಸ್ವಾಮಿ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ.