ಕೊಲಂಬೊ(ಫೆ.04): ವೆಸ್ಟ್‌ ಇಂಡೀಸ್‌ ಪ್ರವಾಸಕ್ಕಾಗಿ ಸಜ್ಜಾಗುತ್ತಿರುವ ಶ್ರೀಲಂಕಾ ಕ್ರಿಕೆಟ್‌ ತಂಡದ ಕೋಚ್‌ ಮಿಕಿ ಆರ್ಥರ್‌ ಹಾಗೂ ಬ್ಯಾಟ್ಸ್‌ಮನ್‌ ಲಹಿರು ತಿರಿಮನ್ನೆಗೆ ಕೊರೋನಾ ಸೋಂಕು ತಗುಲಿದೆ. ಇಬ್ಬರನ್ನು ಐಸೋಲೆಷನ್‌ನಲ್ಲಿ ಇರಿಸಲಾಗಿದೆ. ಜನವರಿ 28 ರಿಂದ ಪೂರ್ವಭ್ಯಾಸ ಶಿಬಿರ ಆರಂಭವಾಗಿತ್ತು. ಮಂಗಳವಾರ 36 ಸದಸ್ಯರೊಳಗೊಂಡ ಲಂಕಾ ಕ್ರಿಕೆಟ್‌ ತಂಡವನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು.

ನನಗೆ ಕೋವಿಡ್ 19 ಸೋಂಕು ತಗುಲಿರುವ ವಿಚಾರ ದೃಢಪಟ್ಟಿದೆ. ನನಗೆ ಯಾವುದೇ ಕೊರೋನಾ ಲಕ್ಷಣಗಳಿಲ್ಲ, ಮತ್ತೆ ಕೊರೋನಾ ಸೋಂಕು ಹೇಗೆ ಮತ್ತೆ ಎಲ್ಲಿ ತಗುಲಿತು ಎಂದು ಗೊತ್ತಾಗುತ್ತಿಲ್ಲ. ಆದಾಗಿಯೂ ಸಂಬಂಧಪಟ್ಟವರಿಗೆ ಈ ವಿಚಾರವನ್ನು ತಿಳಿಸಿದ್ದು, ಬೇರೆಯವರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇನೆ ಎಂದು ಲಹಿರು ತಿರುಮನ್ನೆ ಟ್ವೀಟ್‌ ಮಾಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ  ಶ್ರೀಲಂಕಾ ತಂಡವು ಫೆಬ್ರವರಿ20 ರಿಂದ ವೆಸ್ಟ್ ಇಂಡೀಸ್‌ ಪ್ರವಾಸ ಮಾಡಬೇಕಿತ್ತು. ಫೆಬ್ರವರಿ 28ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಬೇಕಿತ್ತು. ಆದರೀಗ ಈ ಟೆಸ್ಟ್‌ ಸರಣಿ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ವಿಂಡೀಸ್‌ ವಿರುದ್ಧ ಬಾಂಗ್ಲಾದೇಶ ಗೌರವಾನ್ವಿತ ಮೊತ್ತ

ಕಳೆದ ತಿಂಗಳು ಲಂಕಾ ವೇಗಿ ಬಿನುರಾ ಫರ್ನಾಂಡೋ ಹಾಗೂ ಆಲ್ರೌಂಡರ್‌ ಚಮಿಕಾ ಕರುಣರತ್ನೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ವೆಸ್ಟ್ ಪ್ರವಾಸಕ್ಕೆ ಅಭ್ಯಾಸ ನಡೆಸುತ್ತಿದ್ದ ತಂಡದಿಂದ ಈ ಇಬ್ಬರು ಆಟಗಾರರನ್ನು ಅಭ್ಯಾಸ ಶಿಬಿರದಿಂದ ದೂರವಿಡಲಾಗಿತ್ತು.