ದುಬೈ(ನ.20): ಕಳೆದ ಮೂರು ತಿಂಗಳುಗಳಿಂದ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ಕುಟುಂಬದೊಂದಿಗೆ ದುಬೈನಲ್ಲಿ ರಜೆಯ ಖುಷಿಯನ್ನು ಅನುಭವಿಸುತ್ತಿದ್ದಾರೆ. ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವಂತೂ ಇನ್ನಷ್ಟು ಸಮಯವನ್ನು ಪತ್ನಿ ಸಾಕ್ಷಿ ಹಾಗೂ ಮಗಳು ಝಿವಾಳೊಟ್ಟಿಗೆ ಕಳೆಯುತ್ತಿದ್ದಾರೆ.

ಇದರ ನಡುವೆ ನವೆಂಬರ್‌ 19ರಂದು ಸಾಕ್ಷಿ ಹುಟ್ಟುಹಬ್ಬವನ್ನು ಧೋನಿ ದುಬೈನಲ್ಲಿಯೇ ಆಚರಿಸಿದ್ದಾರೆ. ಈ ಖುಷಿಯ ಸಂದರ್ಭಕ್ಕೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೊಯೆಬ್ ಮಲಿಕ್, ಪತ್ನಿ ಸಾನಿಯಾ ಮಿರ್ಜಾ ಹಾಗೂ ಸಾನಿಯಾ ತಂಗಿ ಸಾಥ್ ನೀಡಿದ್ದಾರೆ. ಹೌದು, ಮೈದಾನದಲ್ಲಿ ಭಾರತ-ಪಾಕಿಸ್ತಾನದ ಕ್ರಿಕೆಟಿಗರು ಬದ್ಧ ಎದುರಾಳಿಗಳಂತೆ ಕಾದಾಡುತ್ತಾರೆ, ಆದರೆ ಮೈದಾನದಾಚೆಗೆ ಉಭಯ ಆಟಗಾರರು ಉತ್ತಮ ಸಂಬಂಧ ಹೊಂದಿದ್ದಾರೆ. ಅಂದಹಾಗೆ ಧೋನಿ ಹಾಗೂ ಮಲಿಕ್ ಉತ್ತಮ ಸ್ನೇಹಿತರು ಕೂಡಾ ಹೌದು.

ಆಸೀಸ್ ಎದುರಿನ ಸೀಮಿತ ಓವರ್‌ ಸರಣಿಯಲ್ಲಿ ಈ ಐವರು ರೋಹಿತ್ ಶರ್ಮಾ ಸ್ಥಾನ ತುಂಬಬಹುದು..!

ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರ್ತ್‌ಡೇ ಗರ್ಲ್ ಸಾಕ್ಷಿ, ಧೋನಿ ಹಾಗೂ ತಮ್ಮ ಕುಟುಂಬ ಒಟ್ಟಿಗೆ ಇರುವ ಫೋಟೋವನ್ನು ಶೇರ್‌ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶೊಯೆಬ್ ಮಲಿಕ್ ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಪಾಕಿಸ್ತಾನ ಪರ ಟಿ20 ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಿಂದ ಹಿಂದೆ ಸರಿದಿರುವ ಮಲಿಕ್ ಪತ್ನಿ ಸಾನಿಯಾ ಜತೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.