ಭಾರತ ಎದುರಿನ 5 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ತಂಡ ಪ್ರಕಟವಿಂಡೀಸ್ ತಂಡದಲ್ಲಿದ್ದಾರೆ ಹಲವಾರು ಸ್ಟಾರ್ ಆಲ್ರೌಂಡರ್‌ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ವೆಸ್ಟ್ ಇಂಡೀಸ್?
ಪೋರ್ಟ್ ಆಫ್ ಸ್ಪೇನ್(ಜು.29): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರದಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಸರಣಿಗೆ ಬಲಿಷ್ಠ ವಿಂಡೀಸ್ ತಂಡ ಪ್ರಕಟವಾಗಿದೆ. ಭಾರತ ಎದುರಿನ ಸರಣಿಯ ಬಳಿಕ ವೆಸ್ಟ್ ಇಂಡೀಸ್ ತಂಡವು ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಎರಡು ಚುಟುಕು ಕ್ರಿಕೆಟ್ ಸರಣಿಗೆ 16 ಆಟಗಾರರನ್ನೊಳಗೊಂಡ ವೆಸ್ಟ್ ಇಂಡೀಸ್ ತಂಡ ಪ್ರಕಟವಾಗಿದ್ದು, ಎಡಗೈ ಸ್ಪೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್ ತಂಡ ಕೂಡಿಕೊಂಡಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯು ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಪ್ಲೋರಿಡಾದಲ್ಲಿ ನಡೆಯಲಿವೆ. ಶುಕ್ರವಾರವಾದ ಇಂದು ತರೌಬದ ಬ್ರಿಯನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಮೊದಲ ಟಿ20 ಪಂದ್ಯವು ನಡೆಯಲಿದೆ. ವೆಸ್ಟ್ ಇಂಡೀಸ್ ತಂಡದ ನಾಯಕರಾಗಿ ನಿಕೋಲಸ್ ಪೂರನ್ ಹಾಗೂ ಉಪನಾಯಕರಾಗಿ ರೋಮನ್ ಪೋವೆಲ್ ನೇಮಕವಾಗಿದ್ದಾರೆ. ಇನ್ನು ತಜ್ಞ ಬ್ಯಾಟರ್‌ಗಳ ರೂಪದಲ್ಲಿ ಸಮರ್ಥ್ ಬ್ರೂಕ್ಸ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್ ಹಾಗೂ ಶಿಮ್ರೊನ್ ಹೆಟ್ಮೇಯರ್ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಎದುರಿನ ಏಕದಿನ ಸರಣಿಯಿಂದ ಎಡಗೈ ಸ್ಪೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್ ಅವರನ್ನು ಕೈಬಿಡಲಾಗಿತ್ತು. ಆದರೆ ಇದೀಗ ಟಿ20 ಸರಣಿಗೆ ಹೆಟ್ಮೇಯರ್‌ಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಇನ್ನು ವಿಂಡೀಸ್ ತಂಡದಲ್ಲಿ ಆಲ್ರೌಂಡರ್‌ಗಳ ದಂಡೇ ಇದ್ದು, ಜೇಸನ್ ಹೋಲ್ಡರ್, ರೊಮ್ಯಾರಿಯೋ ಶೆಫರ್ಡ್, ಓಡೆನ್ ಸ್ಮಿತ್, ಡೋಮಿನಿಕ್ ಡ್ರೇಕ್ಸ್, ಡೆವೊನ್ ಥಾಮಸ್, ಕೀಮೋ ಪೌಲ್ ಹಾಗೂ ಅಕೇಲ್ ಹೊಸೈನ್ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ತಂಡದಲ್ಲಿ ತಜ್ಞ ಬೌಲರ್‌ಗಳ ರೂಪದಲ್ಲಿ ಅಲ್ಜೆರಿ ಜೋಸೆಫ್, ಓಬೆಡ್ ಮೆಕಾಯ್ ಹಾಗೂ ಹೇಡನ್ ವಾಲ್ಷ್ ಜೂನಿಯರ್ ಸ್ಥಾನ ಪಡೆದಿದ್ದಾರೆ.
Ind vs WI: ಕೆ ಎಲ್ ರಾಹುಲ್ ಔಟ್, ಟೀಂ ಇಂಡಿಯಾಗೆ ಬಲಿಷ್ಠ ಆಟಗಾರ ಸೇರ್ಪಡೆ..!
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ತರೌಬಾದಲ್ಲಿ ನಡೆಯಲಿದ್ದು, ಆಗಸ್ಟ್ 1 ಮತ್ತು 2ಕ್ಕೆ ನಿಗದಿಯಾಗಿರುವ ಪಂದ್ಯಗಳಿಗೆ ಸೇಂಟ್ಸ್ ಕಿಟ್ಸ್ ಆತಿಥ್ಯ ವಹಿಸಲಿದೆ. ಇನ್ನೆರಡು ಪಂದ್ಯಗಳು ಆಗಸ್ಟ್.6, 7ಕ್ಕೆ ಅಮೆರಿಕದ ಪ್ಲೋರಿಡಾದಲ್ಲಿ ನಡೆಯಲಿವೆ.
ಭಾರತ ಎದುರಿನ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ ಹೀಗಿದೆ ನೋಡಿ
ನಿಕೋಲಸ್ ಪೂರನ್(ನಾಯಕ), ರೋಮನ್ ಪೋವೆಲ್(ಉಪನಾಯಕ), ಸಮರ್ಥ ಬ್ರೂಕ್ಸ್, ಡೋಮಿನಿಕ್ ಡ್ರೀಕ್ಸ್, ಶಿಮ್ರೊನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜೆರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಒಬೆಡ್ ಮೆಕಾಯ್, ಕೀಮೋ ಪೌಲ್, ರೊಮ್ಯಾರಿಯೋ ಶೆಫರ್ಡ್, ಒಡೆನ್ ಸ್ಮಿತ್, ಡೆವೊನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್.
ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಗೆ ಭಾರತ ತಂಡ ಹೀಗಿದೆ ನೋಡಿ
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಅಶ್‌ರ್‍ದೀಪ್ ಸಿಂಗ್.
