ಭಾರತ-ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ* ಈಗಾಗಲೇ ಮೊದಲ ಪಂದ್ಯ ಗೆದ್ದು ಬೀಗಿರುವ ಶಿಖರ್ ಧವನ್ ಪಡೆ* ಏಕದಿನ ಸರಣಿ ಗೆಲ್ಲಲು ಹಾತೊರೆಯುತ್ತಿದೆ ಟೀಂ ಇಂಡಿಯಾ
ಪೋರ್ಚ್ ಆಫ್ ಸ್ಪೇನ್(ಜು.24): ಯುವ ತಂಡವನ್ನು ಕಟ್ಟಿಕೊಂಡು ವಿಂಡೀಸ್ ನೆಲದಲ್ಲಿ ಸೆಣಸುತ್ತಿರುವ ಶಿಖರ್ ಧವನ್ ತಮ್ಮ ನಿವೃತ್ತಿಗೂ ಮೊದಲು ನಾಯಕನಾಗಿ ಸಾಧ್ಯವಾದಷ್ಟುಸಾಧನೆ ಮಾಡುವ ಹುಮ್ಮಸ್ಸಿನಲ್ಲಿದ್ದು, ವೆಸ್ಟ್‌ಇಂಡೀಸ್ ವಿರುದ್ಧ ಭಾನುವಾರ ನಡೆಯಲಿರುವ 2ನೇ ಏಕದಿನ ಪಂದ್ಯವನ್ನು ಭಾರತವನ್ನು ಗೆಲ್ಲಿಸಿ ಸರಣಿ ಜಯದತ್ತ ಮುನ್ನಡೆಸಲು ಎದುರು ನೋಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ, 2ನೇ ಪಂದ್ಯದಲ್ಲಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸಂಘಟಿತ ಆಟದ ಮೂಲಕ ನಿರಾಯಾಸವಾಗಿ ಗೆಲ್ಲಲು ಕಾತರಿಸುತ್ತಿದೆ.
19 ತಿಂಗಳ ಬಳಿಕ ಆರಂಭಿಕನಾಗಿ ಆಡುವ ಅವಕಾಶ ಪಡೆದ ಶುಭ್‌ಮನ್ ಗಿಲ್ ಆಕರ್ಷಕ ಆಟದ ಮೂಲಕ ಗಮನ ಸೆಳೆದರೆ, ಶ್ರೇಯಸ್ ಅಯ್ಯರ್ ಸಹ ಮಿಂಚಿದ್ದರು. ಮಧ್ಯಮ ಕ್ರಮಾಂಕದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಮೊದಲ ಪಂದ್ಯದಲ್ಲಿ ಮೊದಲ 35 ಓವರಲ್ಲಿ 225 ರನ್ ಗಳಿಸಿದ್ದ ಭಾರತ, ಕೊನೆ 15 ಓವರಲ್ಲಿ ಕೇವಲ 83 ರನ್ ಗಳಿಸಿತ್ತು. ಹೀಗಾಗಿ ಸೂರ್ಯಕುಮಾರ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮೇಲೆ ಒತ್ತಡವಿದೆ.
ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶಿಖರ್ ಧವನ್ ಕೇವಲ 3 ರನ್‌ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದರು. ಇದೀಗ ಧವನ್ ಮತ್ತೊಂದು ದೊಡ್ಡ ಇನಿಂಗ್ಸ್ ಕಟ್ಟಲು ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಆರಂಭಿಕನಾಗಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಶುಭ್‌ಮನ್ ಗಿಲ್ ಮೊದಲ ಪಂದ್ಯದಲ್ಲಿ ಚುರುಕಿನ ಅರ್ಧಶತಕ ಸಿಡಿಸಿದ್ದರು. ಶ್ರೇಯಸ್ ಅಯ್ಯರ್ ಕೂಡಾ ಉತ್ತಮ ಲಯದಲ್ಲಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಇಂದು ಒಳ್ಳೆಯ ಇನಿಂಗ್ಸ್ ಆಡಲು ಹಾತೊರೆಯುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲೂ ಭಾರತ ಸುಧಾರಿತ ಪ್ರದರ್ಶನ ತೋರಬೇಕಿದ್ದು, ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಬೌಲರ್‌ಗಳು ರನ್ ನಿಯಂತ್ರಿಸುವುದರ ಜೊತೆಗೆ ವಿಕೆಟ್ ಕಬಳಿಸುವತ್ತಲ್ಲೂ ಹೆಚ್ಚಿನ ಗಮನ ಹರಿಸಬೇಕಿದೆ. ಪ್ರಮುಖವಾಗಿ ಮೊಹಮದ್ ಸಿರಾಜ್, ಯಜುವೇಂದ್ರ ಚಹಲ್ ಮೇಲೆ ನಿರೀಕ್ಷೆ ಇಡಲಾಗಿದೆ. ಕನ್ನಡದ ವೇಗಿ ಪ್ರಸಿದ್ದ್ ಕೃಷ್ಣ ಮೊದಲ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರು. ಇಂದು ಫಾರ್ಮ್‌ಗೆ ಮರಳಲು ಕಾಯುತ್ತಿದ್ದಾರೆ.
ಜಡೇಜಾ ಇಂಜುರಿ; ಶ್ರೇಯಸ್ ಅಯ್ಯರ್‌ಗೆ ಒಲಿದ ಟೀಂ ಇಂಡಿಯಾ ಉಪನಾಯಕ ಪಟ್ಟ..!
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಸರಣಿ ಸೋತಿದ್ದ ವೆಸ್ಟ್‌ಇಂಡೀಸ್, ಭಾರತ ವಿರುದ್ಧವೂ ಸರಣಿ ಸೋಲು ತಪ್ಪಿಸಿಕೊಳ್ಳಲು ಎದುರು ನೋಡುತ್ತಿದ್ದು ಇನ್ನಷ್ಟು ತೀವ್ರತೆಯೊಂದಿಗೆ ಆಡಬೇಕಿದೆ. ವಿಂಡೀಸ್ ಪರ ಬ್ಯಾಟಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಕೊನೆಯ ಕ್ಷಣದಲ್ಲಿ ಭಾರತದೆದರು ಸೋಲೊಪ್ಪಿಕೊಂಡಿತ್ತು. ಇದೀಗ ಏಕದಿನ ಸರಣಿ ಗೆಲ್ಲುವ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ ಕೆರಿಬಿಯನ್ ಪಡೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಶಿಖರ್ ಧವನ್(ನಾಯಕ), ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ.
ವಿಂಡೀಸ್: ಶಾಯ್ ಹೋಪ್, ಕೈಲ್ ಮೇಯರ್ಸ್, ಸಿಮ್ರೊನ್ ಬ್ರೂಕ್ಸ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್(ನಾಯಕ), ರೋಮನ್ ಪೋವೆಲ್, ಅಕೆಲಾ ಹೊಸೈನ್, ಶೆಫರ್ಡ್, ಅಲ್ಜೆರಿ ಜೋಸೆಫ್, ಸೀಲ್ಸ್, ಗುಡಾಕೇಶ್.
ಪಂದ್ಯ: ಸಂಜೆ 7ಕ್ಕೆ,
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್‌ಕೋಡ್
