ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಟೀಂ ಇಂಡಿಯಾ; ಕೇಪ್‌ಟೌನ್ ಟೆಸ್ಟ್‌ಗೆ ಮಾರಕ ವೇಗಿ ಸೇರ್ಪಡೆ
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮೊಹಮ್ಮದ್ ಶಮಿ ಅನುಪಸ್ಥಿತಿ ಬಲವಾಗಿ ಕಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ ಎರಡು ಬಾರಿ 5+ ವಿಕೆಟ್ ಸೇರಿದಂತೆ 35 ವಿಕೆಟ್ ಕಬಳಿಸಿದ್ದಾರೆ.
ಕೇಪ್‌ಟೌನ್(ಡಿ.29): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 32 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನಿಂದ ತಕ್ಷಣವೇ ಎಚ್ಚೆತ್ತುಕೊಂಡಿರುವ ಬಿಸಿಸಿಐ ಬಲಗೈ ವೇಗಿ ಆವೇಶ್ ಖಾನ್‌ಗೆ ಬುಲಾವ್ ನೀಡಿದೆ. ದಕ್ಷಿಣ ಆಫ್ರಿಕಾ ಎದುರಿನ ಸರಣಿ ಆರಂಭಕ್ಕೂ ಮುನ್ನ ಅನುಭವಿ ವೇಗಿ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇದೀಗ ಶಮಿ ಬದಲಿಗೆ ಆವೇಶ್ ಖಾನ್‌ಗೆ ಟೀಂ ಇಂಡಿಯಾ ಮಣೆ ಹಾಕಿದೆ. ಮೊಹಮ್ಮದ್ ಶಮಿ ಸದ್ಯ ಪಾದ್ಯದ ಗಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ.
ಆವೇಶ್ ಖಾನ್ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 6 ವಿಕೆಟ್ ಕಬಳಿಸಿ ಮಿಂಚಿದ್ದರು. ಸೆಂಚೂರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಆವೇಶ್ ಖಾನ್‌ಗೆ ಬುಲಾವ್ ಬಂದಿದ್ದು, ಕೇಪ್‌ಟೌನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಬಲಗೈ ವೇಗಿ ಆವೇಶ್ ಖಾನ್ ಇದುವರೆಗೂ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಭಾರತ ಪರ 8 ಏಕದಿನ ಹಾಗೂ 19 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆವೇಶ್ ಖಾನ್ 22.65ರ ಸರಾಸರಿಯಲ್ಲಿ 149 ವಿಕೆಟ್ ಕಬಳಿಸಿದ್ದಾರೆ.
ಗಾಯದ ಮೇಲೆ ಬರೆ: ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಶಾಕ್ ನೀಡಿದ ಐಸಿಸಿ..!
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬಹುತೇಕ ಬ್ಯಾಟರ್‌ಗಳ ವೈಪಲ್ಯದ ಹೊರತಾಗಿಯೂ ಕೆ ಎಲ್ ರಾಹುಲ್ ಬಾರಿಸಿದ ಸಮಯೋಚಿತ ಶತಕದ ನೆರವಿನಿಂದ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಇನ್ನು ಇನಿಂಗ್ಸ್ ಆರಂಭಿಸಿದ ಹರಿಣಗಳ ಪಡೆಗೆ ಟೀಂ ಇಂಡಿಯಾ ವೇಗಿಗಳು ಆರಂಭದಲ್ಲಿ ಶಾಕ್ ನೀಡಿದರಾದರೂ, ಆ ಬಳಿಕ ಹಿಡಿತ ಸಾಧಿಸಲು ಯಶಸ್ವಿಯಾಗಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ ತಂಡವು ಡೀನ್ ಎಲ್ಗರ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 408 ರನ್ ಕಲೆಹಾಕುವ ಮೂಲಕ 163 ರನ್‌ಗಳ ಮುನ್ನಡೆ ಗಳಿಸಿತು. ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಹಾಗೂ ಶಾರ್ದೂಲ್ ಠಾಕೂರ್ ದುಬಾರಿ ಎನಿಸಿದರು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಕ್ರಿಕೆಟ್ ತಂಡವು 131 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿತು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮೊಹಮ್ಮದ್ ಶಮಿ ಅನುಪಸ್ಥಿತಿ ಬಲವಾಗಿ ಕಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ ಎರಡು ಬಾರಿ 5+ ವಿಕೆಟ್ ಸೇರಿದಂತೆ 35 ವಿಕೆಟ್ ಕಬಳಿಸಿದ್ದಾರೆ.
ಟೀಕೆ ಮಾಡಿದವರೇ ಈಗ ಹೊಗಳುತ್ತಿದ್ದಾರೆ: ಕೆ ಎಲ್ ರಾಹುಲ್
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಜನವರಿ 03ರಿಂದ ಆರಂಭವಾಗಲಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಎರಡನೆ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸಿ ತವರಿಗೆ ವಾಪಸ್ಸಾಗಲು ರೋಹಿತ್ ಶರ್ಮಾ ಪಡೆ ಎದುರು ನೋಡುತ್ತಿದೆ.