ಏಷ್ಯಾಕಪ್ ಫೈನಲ್‌ ರೇಸ್‌ನಿಂದ ಹೊರಬಿದ್ದ ಟೀಂ ಇಂಡಿಯಾಸೂಪರ್ 4 ಸ್ಟೇಜ್‌ನ ಎರಡೂ ಪಂದ್ಯಗಳಲ್ಲೂ ರೋಹಿತ್ ಪಡೆಗೆ ಸೋಲಿನ ಶಾಕ್ಟೀಂ ಇಂಡಿಯಾ, ಏಷ್ಯಾಕಪ್ ಟೂರ್ನಿಯಿಂದ ಹೊರಬೀಳಲು ಕಾರಣಗಳೇನು?

ದುಬೈ(ಸೆ.08): ಐಸಿಸಿ ಟಿ20 ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೀಗಿದ್ದರೂ ಭಾರತ ತಂಡ ಇನ್ನೂ ಸಂಪೂರ್ಣವಾಗಿ ಸಿದ್ಧಗೊಂಡಿಲ್ಲ. ಅಂತಿಮ 15 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲು ತಂಡದ ಆಡಳಿತಕ್ಕೆ, ಆಯ್ಕೆ ಸಮಿತಿಗೆ ಸಾಧ್ಯವಾಗುತ್ತಿಲ್ಲ. ಏಷ್ಯಾಕಪ್‌ ಟಿ20 ಟೂರ್ನಿಯು ಭಾರತ ತನ್ನ ಸಮಸ್ಯೆಗಳನ್ನು ಅರಿತುಕೊಳ್ಳಲು ಉತ್ತಮ ವೇದಿಕೆಯಾಗಿದೆ. ಸೂಪರ್‌-4 ಹಂತದಲ್ಲಿ ಅನುಭವಿಸಿದ ಸತತ 2 ಸೋಲು, ತಂಡ ಯಾವ್ಯಾವ ವಿಭಾಗಗಳಲ್ಲಿ ಸುಧಾರಣೆ ಕಾಣಬೇಕು, ಬದಲಾವಣೆ ಮಾಡಿಕೊಳ್ಳಬೇಕು ಎನ್ನುವುದನ್ನು ತೋರಿಸಿದೆ. ಭಾರತದ ದಯನೀಯ ವೈಫಲ್ಯಕ್ಕೆ ಕಾರಣಗಳೇನು ಎನ್ನುವ ವಿವರ ಇಲ್ಲಿದೆ.

ಕೈಹಿಡಿಯದ ಪ್ರಯೋಗಗಳು

ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ನಾಯಕ ರೋಹಿತ್‌ ಶರ್ಮಾ ತಂಡದ ಜವಾಬ್ದಾರಿ ವಹಿಸಿಕೊಂಡಾಗ ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಮುಖ್ಯ ಗುರಿ ಎಂದು ಹೇಳಿದ್ದರು. ದ್ವಿಪಕ್ಷೀಯ ಸರಣಿಗಳಲ್ಲಿ ಇವರಿಬ್ಬರ ಪ್ರಯೋಗಗಳು ತಕ್ಕಮಟ್ಟಿಗೆ ಕೈಹಿಡಿದರೂ, ಏಷ್ಯಾಕಪ್‌ನಲ್ಲಿ ಎಲ್ಲವೂ ಉಲ್ಟಾ ಆಗಿದೆ. ಆರಂಭಿಕ ಜೋಡಿಯನ್ನು ಪದೇ ಪದೇ ಬದಲಿಸುತ್ತಿರುವ ಭಾರತ, ಮಧ್ಯಮ ಕ್ರಮಾಂಕದಲ್ಲೂ ಸಮತೋಲನ ಕಂಡುಕೊಳ್ಳುತ್ತಿಲ್ಲ. ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿ ಪ್ಲ್ಯಾನ್‌ ‘ಬಿ’ ಕಂಡು ಬರುತ್ತಿಲ್ಲ.

ಆಯ್ಕೆ ಗೊಂದಲ

ಗಾಯಾಳು ಜಡೇಜಾ ಹೊರಬಿದ್ದ ಬಳಿಕ ಭಾರತ ತಂಡದ ಆಯ್ಕೆ ಅಚ್ಚರಿಗೆ ಕಾರಣವಾಗಿದೆ. ದೀಪಕ್‌ ಹೂಡಾ ಅವರನ್ನು ಬಳಸಿಕೊಳ್ಳುತ್ತಿರುವ ಬಗ್ಗೆಯೂ ಪ್ರಶ್ನೆಗಳು ಮೂಡಿವೆ. ಕಳೆದೆರಡು ಪಂದ್ಯಗಳಲ್ಲಿ ಹೂಡಾ 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದು, ಕೇವಲ 2 ಓವರ್‌ ಬೌಲ್‌ ಮಾಡಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ್ದರೂ ಹೂಡಾಗೆ ಫಿನಿಶರ್‌ ಪಾತ್ರ ನೀಡಲಾಗಿದೆ. ರಾಹುಲ್‌, ಪಂತ್‌ ಲಯ ಕಂಡುಕೊಳ್ಳದಿದ್ದರೂ ಮುಂದುವರಿಸಲಾಗುತ್ತಿದೆ. ದಿನೇಶ್‌ ಕಾರ್ತಿಕ್‌ರನ್ನು ಬಳಸಿಕೊಳ್ಳುವಲ್ಲಿ ತಂಡ ಎಡವುತ್ತಿದೆ.

Asia Cup 2022: ಆಫ್ಘಾನ್ ಎದುರಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಆಟಕ್ಕುಂಟು, ಲೆಕ್ಕಕ್ಕಿಲ್ಲ..!

ನಿಷ್ಪರಿಣಾಮಕಾರಿ ಬೌಲಿಂಗ್‌

ಏಷ್ಯಾಕಪ್‌ ಭಾರತ ತಂಡಕ್ಕೆ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಜಸ್‌ಪ್ರೀತ್‌ ಬುಮ್ರಾ ಏಷ್ಯಾಕಪ್‌ನಿಂದ ಹೊರಬಿದ್ದ ಬಳಿಕ ಅನುಭವಿ ಮೊಹಮದ್‌ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಹರ್ಷಲ್‌ ಪಟೇಲ್‌ ಸಹ ಇಲ್ಲದಿರುವಾಗ ಸಂಪೂರ್ಣವಾಗಿ ಭುವನೇಶ್ವರ್‌ ಒಬ್ಬರನ್ನೇ ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಆವೇಶ್‌ ಖಾನ್ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಅಶ್‌ರ್‍ದೀಪ್‌ಗೆ ಇನ್ನೂ ಅನುಭವ ಸಾಲದು. ಚಹಲ್‌ ದುಬಾರಿಯಾಗುತ್ತಿದ್ದಾರೆ. ವಿಶ್ವಕಪ್‌ಗೂ ಮುನ್ನ ಬೌಲಿಂಗ್‌ ಸಮಸ್ಯೆಯನ್ನು ಭಾರತ ಬಗೆಹರಿಸಿಕೊಳ್ಳಬೇಕಿದೆ.

ತಂಡ 95% ಸಿದ್ಧ, ಕೆಲ ಪ್ರಶ್ನೆಗಳಿಗೆ ಉತ್ತರ ಬೇಕಿದೆ

ದುಬೈ: ಏಷ್ಯಾಕಪ್‌ ಸೂಪರ್‌-4 ಹಂತದಲ್ಲಿ ಸತತ 2 ಸೋಲು ಕಂಡ ಬಳಿಕ ಮಾತನಾಡಿದ ಭಾರತದ ನಾಯಕ ರೋಹಿತ್‌ ಶರ್ಮಾ ಟಿ20 ವಿಶ್ವಕಪ್‌ಗೆ ತಂಡ ಶೇ.95ರಷ್ಟುಸಿದ್ಧಗೊಂಡಿದೆ ಎಂದಿದ್ದಾರೆ. ‘ವಿಶ್ವಕಪ್‌ಗೆ ಬೇಕಿರುವ ತಂಡ ಬಹುತೇಕ ಸಿದ್ಧವಿದೆ. ಶೇ.90-95ರಷ್ಟುಸಮತೋಲನ ಕಂಡುಕೊಂಡಿದ್ದೇವೆ. ಆದರೆ ಇನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಕೆಲ ಬದಲಾವಣೆಗಳು ಆಗಲಿವೆ’ ಎಂದಿದ್ದಾರೆ.