Asianet Suvarna News Asianet Suvarna News

ICC T20 Rankings: 6 ವರ್ಷಗಳ ಬಳಿಕ ಮತ್ತೆ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಟೀಂ ಇಂಡಿಯಾ..!

* ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ

* ವಿಂಡೀಸ್ ಎದುರಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ರೋಹಿತ್ ಶರ್ಮಾ ಪಡೆ

* ವೆಸ್ಟ್ ಇಂಡೀಸ್ ಎದುರಿನ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕೈವಶ

Rohit Sharma led Team India advance to No 1 of ICC T20I team rankings after Clinical Performance against West Indies kvn
Author
Bengaluru, First Published Feb 21, 2022, 2:09 PM IST

ದುಬೈ(ಫೆ.21): ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ(Team India), ವೆಸ್ಟ್ ಇಂಡೀಸ್‌ ವಿರುದ್ದ 3-0 ಅಂತರದಲ್ಲಿ ಟಿ20 ಸರಣಿಯನ್ನು ವೈಟ್‌ವಾಷ್ ಮಾಡಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಬರೋಬ್ಬರಿ 6 ವರ್ಷಗಳ ಬಳಿಕ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ (ICC T20 Rankings) ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು (England Cricket Team) ತಲಾ 269 ರೇಟಿಂಗ್ ಅಂಕಗಳನ್ನು ಹೊಂದಿದ್ದರು ಸಹಾ ಇಂಗ್ಲೆಂಡ್‌(10,474)ಗಿಂತ ಟೀಂ ಇಂಡಿಯಾ 10 ಅಂಕ ಹೆಚ್ಚು ಅಂಕ(10,484)ಗಳನ್ನು ಹೊಂದಿದ್ದರಿಂದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
 
ವೆಸ್ಟ್ ಇಂಡೀಸ್ ತಂಡವು (West Indies Cricket Team) ಭಾರತ ಪ್ರವಾಸದಲ್ಲಿನ ಟಿ20 ಸರಣಿಯಲ್ಲಿ ಉತ್ತಮ ಪ್ರತಿರೋಧ ತೋರಿತಾದರೂ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಕೆರಿಬಿಯನ್ ಪಡೆಗೆ ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಪೈಕಿ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇನ್ನು ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 17 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ (Suryakumar Yadav) 31 ಎಸೆತಗಳಲ್ಲಿ 65 ರನ್‌ ಬಾರಿಸುವ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಜತೆಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಶ್ರೇಯಸ್ ಅಯ್ಯರ್ ಜತೆಗೆ ಆಲ್ರೌಂಡರ್‌ ವೆಂಕಟೇಶ್ ಅಯ್ಯರ್, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ, ವೇಗದ ಬೌಲರ್ ಹರ್ಷಲ್‌ ಪಟೇಲ್‌ (Harshal Patel) ಗಮನಾರ್ಹ ಪ್ರದರ್ಶನ ತೋರಿದ್ದರು. ಇನ್ನು ವೆಸ್ಟ್ ಇಂಡೀಸ್ ತಂಡದ ನಿಕೋಲಸ್ ಪೂರನ್ ಹಾಗೂ ರೋಸ್ಟನ್‌ ಚೇಸ್‌ ಸ್ಥಿರ ಪ್ರದರ್ಶನ ತೋರಿದ್ದರು.

ಟೀಂ ಇಂಡಿಯಾ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮಾ:

ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಅದ್ಭುತ ತೋರಿದ ಟೀಂ ಇಂಡಿಯಾ ಆಟಗಾರರ ಕುರಿತಂತೆ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ಸರಣಿಯನ್ನು ಜಯಿಸಿದ್ದು ಖುಷಿ ಕೊಟ್ಟಿದೆ. ನಾವೇನು ನಿರೀಕ್ಷಿಸಿದ್ದೆವೋ ಅದೆಲ್ಲವೂ ಸಿಕ್ಕಿದೆ. ಮುಂಬರುವ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರಿಗೂ ಸೂಕ್ತ ಅವಕಾಶವನ್ನು ನೀಡುತ್ತಿದ್ದೇವೆ. ಇನ್ನು ಶ್ರೀಲಂಕಾ ಎದುರಿನ ಸರಣಿಯು ಮತ್ತೊಂದು ಚಾಲೆಂಜ್ ಆಗಿದೆ. ಒಂದು ತಂಡವಾಗಿ ಆಡುವುದನ್ನು ನಾವು ನೋಡುತ್ತೇವೆ ಎಂದು ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಎರಡನೆ ಸ್ಥಾನದಲ್ಲಿದೆ. ಇನ್ನುಳಿದಂತೆ ಪಾಕಿಸ್ತಾನ(266), ನ್ಯೂಜಿಲೆಂಡ್(255), ದಕ್ಷಿಣ ಆಫ್ರಿಕಾ(253) ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿವೆ. ಇನ್ನು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ದ 4-1 ಅಂತರದಲ್ಲಿ ಟಿ20 ಸರಣಿಯನ್ನು ಜಯಿಸಿದ್ದರೂ ಸಹಾ 249 ರೇಟಿಂಗ್ ಅಂಕಗಳೊಂದಿಗೆ 6ನೇ ಸ್ಥಾನದಲ್ಲಿಯೇ ಮುಂದುವರೆದಿದೆ. ಇನ್ನು ಭಾರತ ವಿರುದ್ದ ವೈಟ್‌ವಾಷ್ ಮುಖಭಂಗ ಅನುಭವಿಸಿದ ವೆಸ್ಟ್ ಇಂಡೀಸ್ ತಂಡವು 235 ರೇಟಿಂಗ್ ಅಂಕಗಳೊಂದಿಗೆ 7ನೇ ಸ್ಥಾನ ಪಡೆದರೆ, ಆಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿವೆ.

Follow Us:
Download App:
  • android
  • ios