ನವದೆಹಲಿ(ನ.25): ದೇಶದ ಪ್ರಸ್ತುತ ಆಟಗಾರರ ಪೈಕಿ ರಿಷಭ್ ಪಂತ್ ಹಾಗೂ ವೃದ್ದಿಮಾನ್ ಸಾಹ ಈ ಇಬ್ಬರು ಒಳ್ಳೆಯ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗಳು ಎಂದು ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಧೋನಿಯ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಜೋರಾಗಿದೆ. ಈ ಪೈಕಿ ಸ್ಥಿರ ಪ್ರದರ್ಶನದ ಮೂಲಕ ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ರಿಷಭ್ ಪಂತ್ ಹಾಗೂ ವೃದ್ದಿಮಾನ್ ಸಾಹ ಈ ಇಬ್ಬರು ಆಟಗಾರರು ಪ್ರಸ್ತುತ ನಮ್ಮ ದೇಶದ ಉತ್ತಮ ವಿಕೆಟ್‌ ಕೀಪರ್‌ಗಳು ಎಂದು ಹೇಳಿದ್ದಾರೆ.

ರಿಷಭ್ ಪಂತ್ ತಮ್ಮ ಪ್ರತಿಭೆಗೆ ತಕ್ಕಂತಹ ಆಟವಾಡುವಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಪಂತ್‌ಗೆ ಸಾಕಷ್ಟು ಅವಕಾಶ ನೀಡಿದರೂ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವಿಫಲರಾಗಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಪಂತ್ ಪ್ರದರ್ಶನ ಸಾಧಾರಣವಾಗಿದ್ದು, ಕೇವಲ ಒಂದು ಅರ್ಧಶತಕ ಬಾರಿಸಲಷ್ಟೇ ಡೆಲ್ಲಿ ಬ್ಯಾಟ್ಸ್‌ಮನ್ ಸಫಲರಾಗಿದ್ದರು. ಇದೆಲ್ಲದರ ಹೊರತಾಗಿಯೂ ಸೌರವ್ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಪಂತ್ ಬೆನ್ನಿಗೆ ನಿಂತಿದ್ದಾರೆ.

ಪಂತ್ ಬ್ಯಾಟಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆತ ಆದಷ್ಟು ಬೇಗ ಲಯಕ್ಕೆ ಮರಳಲಿದ್ದಾನೆ. ಆತನಲ್ಲಿ ಅಸಾಧಾರಣ ಪ್ರತಿಭೆಯಿದ್ದು, ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇಲ್ಲಿದೆ ನೋಡಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ..!

ಇನ್ನು ಐಪಿಎಲ್‌ನಲ್ಲಿ ವೃದ್ದಿಮಾನ್ ಸಾಹ, ಕೆ.ಎಲ್. ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಸಹ ಭರವಸೆ ಉಳಿಸಿಕೊಳ್ಳುವಂತಹ ಪ್ರದರ್ಶನ ತೋರಿದ್ದಾರೆ. ಸಾಹಾ ತಾಂತ್ರಿಕವಾಗಿ ಭಾರತ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಗುರುತಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕೆ.ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಏಕದಿನ ಹಾಗೂ ಟಿ20 ತಂಡದಲ್ಲಿ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದಿದ್ದಾರೆ.

ತಂಡದಲ್ಲಿ ಯಾರಾದರೂ ಒಬ್ಬ ವಿಕೆಟ್‌ ಕೀಪರ್‌ ಆಡಲು ಸಾಧ್ಯ. ಹಾಗಾಗಿ ಯಾರು ಉತ್ತಮ ಫಾರ್ಮ್‌ನಲ್ಲಿರುತ್ತಾರೋ ಅವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.