* 4 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಐಪಿಎಲ್ ಕಲರವಕ್ಕೆ ಕ್ಷಣಗಣನೆ* ಗುರುವಾರ ಆರ್‌ಸಿಬಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾರಾಟ ಆರಂಭ* ಟಿಕೆಟ್ ಬೆಲೆ ದುಬಾರಿಯಾಗಿದ್ದಕ್ಕೆ ನೆಟ್ಟಿಗರು ಟ್ರೋಲ್
ಬೆಂಗಳೂರು(ಮಾ.17): ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ ಎನ್ನುವ ವಿಷಯ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆಯಾದರೂ, ಟಿಕೆಟ್ ದರ ನೋಡಿ ಬಹುತೇಕರು ಕಂಗಾಲಾಗಿದ್ದಾರೆ. 16ನೇ ಆವೃತ್ತಿಯ ತನ್ನ ತವರಿನ ಪಂದ್ಯಗಳಿಗೆ ಆರ್‌ಸಿಬಿ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಆರಂಭಿಸಿದ್ದು, ಕನಿಷ್ಠ ದರವೇ 2,000 ರು.ಗಿಂತ ಜಾಸ್ತಿ ಇದೆ. ಫ್ರಾಂಚೈಸಿಯ ಈ ‘ದುಬಾರಿ’ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದರದ ಕುರಿತಾಗಿ ತಮಾಷೆಯೂ ನಡೆದಿದೆ.
ಗುರುವಾರ ಆರ್‌ಸಿಬಿ ತನ್ನ ಅಧಿಕೃತ ವೆಬ್‌ಸೈಟ್ https://www.royalchallengers.com/rcb-ipl-tickets ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಹಂತದ 7 ಪಂದ್ಯಗಳಿಗೆ ಟಿಕೆಟ್ ಮಾರಾಟ ಆರಂಭಿಸಿದೆ. 11 ವಿವಿಧ ಸ್ಟ್ಯಾಂಡ್‌ಗಳಲ್ಲಿ ಆಸನ ವ್ಯವಸ್ಥೆ ಇದ್ದು, ಒಂದೊಂದಕ್ಕೆ ಒಂದೊಂದು ರೀತಿಯ ದರ ನಿಗದಿ ಮಾಡಲಾಗಿದೆ. ಟಿಕೆಟ್‌ನ ಕನಿಷ್ಠ ದರ 2,118 ರು. ಇದ್ದು, ಗರಿಷ್ಠ ದರ 42,350 ರು. ಇದೆ.
ಬೆಂಗಳೂರಲ್ಲಿ ಕೊನೆಯದಾಗಿ ಐಪಿಎಲ್ ಪಂದ್ಯ ನಡೆದಿದ್ದು 2019ರಲ್ಲಿ. ಆ ವರ್ಷ ಕನಿಷ್ಠ ದರ 1200-1500 ರು. ಇತ್ತು. ಕೌಂಟರ್‌ಗಳಲ್ಲಿ ಕನಿಷ್ಠ 1,000 ರು.ಗೆ ಟಿಕೆಟ್ ಮಾರಾಟವಾಗಿತ್ತು.
ಚೆನ್ನೈ ಪಂದ್ಯಕ್ಕೆ ಅತಿಹೆಚ್ಚು ಬೆಲೆ!
ಎದುರಾಳಿ, ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಇರುವ ಅಂತರ, ಬೇಡಿಕೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ದರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಲಖನೌ, ಕೋಲ್ಕತಾ ವಿರುದ್ಧದ ಪಂದ್ಯಗಳ ಟಿಕೆಟ್ ಬೆಲೆ 2,118 ರು.ನಿಂದ ಆರಂಭವಾಗಲಿದ್ದು, ಗರಿಷ್ಠ 30,801 ರು. ಇದೆ. ಮುಂಬೈ, ಡೆಲ್ಲಿ, ರಾಜಸ್ಥಾನ ಹಾಗೂ ಗುಜರಾತ್ ವಿರುದ್ಧದ ಪಂದ್ಯಗಳಿಗೆ ಟಿಕೆಟ್ ಬೆಲೆ 2,310 ರು.ನಿಂದ ಆರಂಭಗೊಂಡು ಬರೋಬ್ಬರಿ 42,350 ರು. ವರೆಗೆ ಇದೆ.
ಇದೇ ವೇಳೆ ಚೆನ್ನೈ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಟಿಕೆಟ್‌ನ ಕನಿಷ್ಠ ಬೆಲೆ 2,405 ರು. ಆಗಿದ್ದು, ಗರಿಷ್ಠ ಬೆಲೆ 42,350 ರು. ನಿಗದಿಪಡಿಸಲಾಗಿದೆ. ಈ ಪೈಕಿ ಏಪ್ರಿಲ್ 17ರಂದು ಚೆನ್ನೈ ವಿರುದ್ಧದ ಪಂದ್ಯದ ಬಹುತೇಕ ಎಲ್ಲಾ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು, ಏಪ್ರಿಲ್ 2ರ ಮುಂಬೈ ಪಂದ್ಯದ ಟಿಕೆಟ್‌ಗಳೂ ಬಹುತೇಕ ಖಾಲಿಯಾಗಿವೆ.
ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳು ವೈರಲ್:
ಹೌದು, 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯ ಮಂದಿ ಐಪಿಎಲ್ ಕಾದಾಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ದರ ದುಬಾರಿಯಾಗಿದ್ದು, ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ವೈರಲ್ ಆಗಿವೆ.
ನಾಳೆಯಿಂದ ಕೌಂಟರ್‌ನಲ್ಲಿ ಟಿಕೆಟ್:
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ಕೌಂಟರ್‌ಗಳಲ್ಲೂ ಅಭಿಮಾನಿಗಳು ಟಿಕೆಟ್ ಖರೀದಿಸಬಹುದಾಗಿದ್ದು, ಮಾ.18(ಶನಿವಾರ) ಟಿಕೆಟ್ ಮಾರಾಟ ಆರಂಭಗೊಳ್ಳಲಿದೆ. ಆನ್‌ಲೈನ್ ಮೊತ್ತಕ್ಕಿಂತ ಕೌಂಟರ್‌ನಲ್ಲಿ ಮಾರಾಟವಾಗುವ ಟಿಕೆಟ್ ದರ ಸಾಮಾನ್ಯವಾಗಿ ಕಡಿಮೆ ಇರಲಿದೆ. ಆದರೆ ಕೌಂಟರ್ ಟಿಕೆಟ್‌ನ ಮೊತ್ತ ಎಷ್ಟುಎನ್ನುವುದನ್ನು ಫ್ರಾಂಚೈಸಿಯು ಇನ್ನೂ ಬಹಿರಂಗಗೊಳಿಸಿಲ್ಲ.
