ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟೀದಾರ್ ಅವರ ನಿಷ್ಕ್ರಿಯ ಸಿಮ್ ಕಾರ್ಡ್ ಛತ್ತೀಸ್‌ಘಡದ ಯುವಕನಿಗೆ ಹೋಗಿದ್ದರಿಂದಾಗಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಕರೆಗಳು ಆ ಯುವಕನಿಗೆ ಬಂದ ಘಟನೆ ನಡೆದಿದೆ. ಪರಿಣಾಮವಾಗಿ, ಪಾಟೀದಾರ್ ಪೊಲೀಸರಿಗೆ ದೂರು ನೀಡಬೇಕಾಯಿತು.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್ ಇದೀಗ ಹೊಸತೊಂದು ತಲೆನೋವಿಗೊಳಗಾಗಿದ್ದಾರೆ. ಈ ವಿಚಾರವಾಗಿ ಆರ್‌ಸಿಬಿ ತಂಡದ ಕ್ಯಾಪ್ಟನ್ ರಜತ್ ಪಾಟೀದಾರ್, ಛತ್ತೀಸ್‌ಘಡದ ಯುವಕನ ಜತೆ ಮಾತಿನ ಚಕಮಕಿ ನಡೆಸಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಹೆಸರುಗಳು ಥಳುಕು ಹಾಕಿಕೊಂಡಿವೆ. ಈ ಸಮಸ್ಯೆಯನ್ನು ಪರಿಹರಿಸಲು ರಜತ್ ಪಾಟೀದಾರ್, ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಏನಿದು ಘಟನೆ? ರಜತ್ ಪಾಟೀದಾರ್ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದೇಕೆ? ನೋಡೋಣ ಬನ್ನಿ.
ಎನ್‌ಡಿಟಿವಿ ವರದಿಯ ಪ್ರಕಾರ, ರಜತ್ ಪಾಟೀದಾರ್ ಅವರು ಬಳಸುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ ನಂಬರ್ 90 ದಿನಗಳಿಂದ ನಿಷ್ಕ್ರೀಯವಾಗಿತ್ತು. ಹೀಗಾಗಿ ಈ ನಂಬರ್ ಅನ್ನು ಛತ್ತೀಸ್‌ಘಡದ ಗರಿಯಾಬಂದ್ ಜಿಲ್ಲೆಯ ಯುವಕ ಮನೀಶ್ ಎನ್ನುವವರು ಖರೀದಿಸಿದ್ದರು.ಮನೀಶ್ ಜೂನ್ ತಿಂಗಳ ಕೊನೆಯಲ್ಲಿ ರಜತ್ ಪಾಟೀದಾರ್ ಬಳಸುತ್ತಿದ್ದ ಬಳಿಕ ನಿಷ್ಕ್ರಿಯಗೊಂಡಿದ್ದ ರಿಲಯನ್ಸ್ ಜಿಯೋ ಸಿಮ್ ಖರೀದಿಸಿದ್ದರು. ಸಿಮ್ ಆಕ್ಟೀವೇಟ್ ಆದ ಕೆಲವು ದಿನಗಳ ಬಳಿಕ ವಾಟ್ಸ್‌ಅಪ್ ಪ್ರೊಫೈಲ್ ಪಿಕ್‌ನಲ್ಲಿ ರಜತ್ ಪಾಟೀದಾರ್ ಅವರ ಫೋಟೋ ಕಾಣಿಸಿಕೊಂಡಿದೆ. ಇದಾದ ಮತ್ತೆ ಕೆಲವು ದಿನಗಳ ಬಳಿಕ ಈ ನಂಬರ್‌ಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಕಾಲ್ ಬರಲು ಶುರುವಾಯಿತು. ಇದನ್ನು ನೋಡಿದ ಮನೀಶ್ ಒಂದು ಕ್ಷಣ ಕಂಗಾಲಾಗಿ ಹೋಗಿದ್ದಾರೆ. ಈ ನಂಬರ್‌ನ ಸೀರಿಯಸ್‌ನೆಸ್ ಅರ್ಥ ಮಾಡಿಕೊಳ್ಳದ ಮನೀಶ್ ಹಾಗೂ ಆತನ ಸ್ನೇಹಿತ ಖೇಮ್‌ರಾಜ್ ಇಬ್ಬರೂ ಕೊಹ್ಲಿ, ಎಬಿಡಿ ಕಾಲ್ ಬಂದಾಗ ತಮಾಷೆಯಾಗಿ ಮಾತನಾಡಿದ್ದಾರೆ.
ಪೊಲೀಸರಿಗೆ ದೂರು ಕೊಟ್ಟ ರಜತ್ ಪಾಟೀದಾರ್:
ಇದಾದ ಇದಾದ ಕೆಲ ಸಮಯಗಳ ಬಳಿಕ ರಜತ್ ಪಾಟೀದಾರ್ ತಮ್ಮ ಹಳೆಯ ನಂಬರ್ ಕ್ಲೇಮ್ ಮಾಡಿಕೊಳ್ಳಲು ಮನೀಶ್‌ಗೆ ಕಾಲ್ ಮಾಡಿದಾಗ ಮತ್ತೊಮ್ಮೆ ಮನೀಶ್ ಕಂಗಾಲಾಗಿ ಹೋಗಿದ್ದಾರೆ. ಪಾಟೀದಾರ್, ಅದು ನನ್ನ ನಂಬರ್ ಎಂದು ವಿವರಿಸಿದ್ದಾರೆ. ಆಗ ಮನೀಶ್ ಹಾಗೂ ಖೇಮ್‌ರಾಜ್, ಪಾಟೀದಾರ್ ಅವರನ್ನೂ ಗಂಭೀರವಾಗಿ ಪರಿಗಣಿಸದೇ, 'ನಾನು ಧೋನಿ ಮಾತಾಡುತ್ತಿದ್ದೇನೆ' ಎಂದು ಹೇಳಿದ್ದಾರೆ. ಇದೆಲ್ಲ ನೋಡಿ ಬೇಸತ್ತ ರಜತ್ ಪಾಟೀದಾರ್, ನನ್ನ ಹಳೆಯ ಸಿಮ್ ವಾಪಾಸ್ ಕೊಡದಿದ್ದರೇ, ಪೊಲೀಸರಿಗೆ ಕಂಪ್ಲೇಂಟ್ ಮಾಡೋದಾಗಿಯೂ ಎಚ್ಚರಿಸಿದ್ದಾರೆ. ಆದರೆ ಮನೀಶ್, ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದಾಗಿ ಹತ್ತೇ ನಿಮಿಷದಲ್ಲಿ ಪೊಲೀಸರು ಮನೀಶ್ ಮನೆಗೆ ಬಂದಿದ್ದಾರೆ. ಆಗಲೇ ಮನೀಶ್ ಖಚಿತವಾಗಿದ್ದು, ಇದು ರಜತ್ ಪಾಟೀದಾರ್ ನಂಬರ್ ಎಂದು. ಇದಾದ ಬಳಿಕ ಮನೀಶ್, ಸಿಮ್ ಕಾರ್ಡ್ ಅನ್ನು ರಜತ್ ಪಾಟೀದಾರ್‌ಗೆ ವಾಪಾಸ್ ನೀಡಿದ್ದಾರೆ.
ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟ ರಜತ್ ಪಾಟೀದಾರ್: ಕಳೆದ 17 ಐಪಿಎಲ್ ಸೀಸನ್‌ನಲ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025ರ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದಲ್ಲಿ ಕೊನೆಗೂ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಪಂಜಾತ್ ಕಿಂಗ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ನಾಯಕನಾದ ಚೊಚ್ಚಲ ಆವೃತ್ತಿಯಲ್ಲೇ ಆರ್‌ಸಿಬಿಗೆ ಕಪ್ ಗೆದ್ದುಕೊಟ್ಟ ಕೀರ್ತಿ ರಜತ್ ಪಾಟೀದಾರ್ ಪಾಲಾಯಿತು.
