* ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಳಿಯುವ ಸೂಚನೆ ನೀಡಿದ ರವಿಶಾಸ್ತ್ರಿ* ನನ್ನ ಕೋಚಿಂಗ್ ಅವಧಿಯಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದ ಶಾಸ್ತ್ರಿ* ಟಿ20 ವಿಶ್ವಕಪ್ ಗೆದ್ದರೆ ಅದು ಬೋನಸ್ ಆಗಲಿದೆ ಎಂದ ರವಿ
ಲಂಡನ್(ಸೆ.19): ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಕ್ತಾಯಗೊಂಡ ಬಳಿಕ ಭಾರತ ತಂಡದ ಪ್ರಧಾನ ಕೋಚ್ ಹುದ್ದೆಯಿಂದ ಕೆಳಗಿಳಿಯುವುದಾಗಿ ರವಿಶಾಸ್ತ್ರಿ ಖಚಿತಪಡಿಸಿದ್ದಾರೆ.
ಬ್ರಿಟನ್‌ನ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಸ್ತ್ರಿ ಈ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಕೋಚಿಂಗ್ ಅವಧಿಯಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಆದರೆ ನಮ್ಮ ಸಮಯ ಮುಗಿದ ಮೇಲೆ ನಾವು ಇರಬಾರದು’ ಎಂದಿದ್ದಾರೆ. ‘ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ್ನದ್ದನ್ನು ಸಾಧಿಸಿದ್ದೇನೆ. 5 ವರ್ಷ ಟೆಸ್ಟ್‌ನಲ್ಲಿ ನಂ.1 ಆಗಿದ್ದೆವು. ನಾವು ಎಲ್ಲಾ ದೇಶಗಳ ವಿರುದ್ಧ ಅವರದೇ ಅಂಗಳದಲ್ಲಿ ಆಡಿ ಗೆದ್ದಿದ್ದೇವೆ. ಟಿ20 ವಿಶ್ವಕಪ್ ಗೆದ್ದರೆ ಅದು ಬೋನಸ್ ಆಗಲಿದೆ’ ಎಂದಿದ್ದಾರೆ.
ಇದು ನನ್ನ ನಾಲ್ಕು ದಶಕದ ಕ್ರಿಕೆಟ್ ಬದುಕಿನಲ್ಲಿ ಅತ್ಯಂತ ತೃಪ್ತಿಕರ ಕ್ಷಣ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ನೀವು ಇಲ್ಲಿರಬಾರದು. ಹುದ್ದೆ ತೊರೆಯುವುದರಲ್ಲಿ ಬೇಸರವಿದೆ. ಯಾಕೆಂದರೆ ನಾನು ಶ್ರೇಷ್ಠ ಆಟಗಾರರ ಜೊತೆ ಕೆಲಸ ನಿರ್ವಹಿಸಿದ್ದೇನೆ. ಡ್ರೆಸ್ಸಿಂಗ್ ರೂಮಿನಲ್ಲಿ ಉತ್ತಮ ಸಮಯ ಕಳೆದಿದ್ದೇವೆ ಎಂದು ಹೇಳಿದರು.
ಟೀಂ ಇಂಡಿಯಾ ಕೋಚ್ ಮತ್ತೆ ಕನ್ನಡಿಗ ಕುಂಬ್ಳೆಗೆ ಮಣೆ ಹಾಕುತ್ತಾ ಬಿಸಿಸಿಐ..?
ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ರವಿಶಾಸ್ತ್ರಿ ಕೆಳಗಿಳಿದ ಬಳಿಕ ಅನಿಲ್ ಕುಂಬ್ಳೆ ಇಲ್ಲವೇ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅನಿಲ್ ಕುಂಬ್ಳೆ ಈಗಾಗಲೇ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದ್ದು, ಸದ್ಯ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನ ಲಕ್ಷ್ಮಣ್ ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಭಾರತ ಪರ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.
