Asianet Suvarna News Asianet Suvarna News

Ranji Trophy: ರಾಜ್ಯದ ಎದುರು ಕುಸಿದ ಕೇರಳಕ್ಕೆ ಸಚಿನ್ ಬೇಬಿ ಆಸರೆ

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಎದುರು ಕೇರಳ ದಿಟ್ಟ ಹೋರಾಟ
ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದ ಕೇರಳಕ್ಕೆ ಸಚಿನ್ ಬೇಬಿ ಆಸರೆ
ಮೊದಲ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿದ ಕೇರಳ

Ranji Trophy Sachin Baby Century powers Kerala Fight back after early wicket fall against Karnataka kvn
Author
First Published Jan 18, 2023, 8:22 AM IST

ತಿರುವನಂತಪುರಂ: 2022-23ನೇ ಸಾಲಿನ ರಣಜಿ ಟ್ರೋಫಿಯ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತಕ್ಕೊಳಗಾದ ಕೇರಳಕ್ಕೆ ಸಚಿನ್‌ ಬೇಬಿ ಆಕರ್ಷಕ ಶತಕದ ಮೂಲಕ ಆಸರೆಯಾಗಿದ್ದಾರೆ. ಇದರ ಹೊರತಾಗಿಯೂ ರಾಜ್ಯ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಕೇರಳವನ್ನು ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 224 ರನ್‌ಗೆ ನಿಯಂತ್ರಿಸಿದೆ. 2ನೇ ದಿನ ಆತಿಥೇಯ ತಂಡವನ್ನು ಬೇಗನೇ ಆಲೌಟ್‌ ಮಾಡಿ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಗುರಿ ಇಟ್ಟುಕೊಂಡಿದೆ.

ಟಾಸ್‌ ಗೆದ್ದು ದೊಡ್ಡ ಮೊತ್ತದ ನಿರೀಕ್ಷೆಯೊಂದಿಗೆ ಬ್ಯಾಟಿಂಗ್‌ ಆಯ್ದುಕೊಂಡ ಕೇರಳದ ನಿರ್ಧಾರ ಆರಂಭದಲ್ಲೇ ಬುಡಮೇಲಾಯಿತು. ವೇಗಿಗಳಾದ ಕೌಶಿಕ್‌ ಹಾಗೂ ವೈಶಾಖ್‌ ದಾಳಿಗೆ ಸಿಲುಕಿ ಕೇವಲ 6 ರನ್‌ಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು. ರಾಹುಲ್‌ ಪಿ., ರೋಹನ್‌ ಪ್ರೇಮ್‌ ಶೂನ್ಯಕ್ಕೆ ನಿರ್ಗಮಿಸಿದರೆ, ರೋಹನ್‌ ಕುನ್ನುಮ್ಮಾಲ್‌ 5 ರನ್‌ ಗಳಿಸಿ ಔಟಾದರು. ಆದರೆ ಸಚಿನ್‌-ಗೋವಿಂದ್‌ ವತ್ಸಲ್‌ 120 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. ಈ ಜೋಡಿಯನ್ನು ಕೌಶಿಕ್‌ ಬೇರ್ಪಡಿಸಿದರು. 272 ಎಸೆತಗಳಲ್ಲಿ 116 ರನ್‌ ಸಿಡಿಸಿರುವ ಸಚಿನ್‌ ಜೊತೆ ಜಲಜ್‌ ಸಕ್ಸೇನಾ(31) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ರಾಜ್ಯದ ಪರ ಕೌಶಿಕ್‌ 36ಕ್ಕೆ 4 ವಿಕೆಟ್‌ ಕಿತ್ತರೆ, ಮತ್ತೆರಡು ವಿಕೆಟ್‌ ವೈಶಾಖ್‌, ಶ್ರೇಯಸ್‌ ಗೋಪಾಲ್‌ ಪಾಲಾಯಿತು.

ಸ್ಕೋರ್‌: 
ಕೇರಳ ಮೊದಲ ದಿನದಂತ್ಯಕ್ಕೆ 224/6 
(ಸಚಿನ್‌ 116*, ಗೋವಿಂದ್‌ 46, ಕೌಶಿಕ್‌ 4-36)

ಸರ್ಫರಾಜ್‌ ಖಾನ್‌ ಮತ್ತೊಂದು ಶತಕ!

ದೆಹಲಿ: ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ ಬಿಸಿಸಿಐ ಆಯ್ಕೆಗಾರರಿಂದ ಸತತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಮುಂಬೈನ ತಾರಾ ಬ್ಯಾಟರ್‌ ಸರ್ಫರಾಜ್‌ ಖಾನ್‌ ರಣಜಿಯಲ್ಲಿ ಮತ್ತೊಂದು ಆಕರ್ಷಕ ಶತಕ ಸಿಡಿಸಿದ್ದಾರೆ. ದೆಹಲಿ ವಿರುದ್ಧ ಪಂದ್ಯದ ಮೊದಲ ದಿನವೇ ಸರ್ಫರಾಜ್‌ 155 ಎಸೆತಗಳಲ್ಲಿ 125 ರನ್‌ ಗಳಿಸಿದರು. ಇದು ಸರ್ಫರಾಜ್‌ ಈ ಋುತುವಿನಲ್ಲಿ ಗಳಿಸಿದ 3ನೇ, ಒಟ್ಟಾರೆ 13ನೇ ಶತಕ. ತಮಿಳುನಾಡು ವಿರುದ್ಧ 162, ಹೈದರಾಬಾದ್‌ ವಿರುದ್ಧ ಔಟಾಗದೆ 126 ರನ್‌ ಸಿಡಿಸಿದ್ದರು.

ಕಿವೀಸ್‌ ಎದುರಿನ ಸರಣಿಗೂ ಮುನ್ನ ಟಿಂ ಇಂಡಿಯಾಗೆ ಬಿಗ್‌ ಶಾಕ್‌, ಸ್ಟಾರ್ ಆಟಗಾರ ಔಟ್..!

ಮಹಿಳಾ ಐಪಿಎಲ್‌ ತಂಡ ಖರೀದಿ ರೇಸಲ್ಲಿ 30 ಸಂಸ್ಥೆ?

ನವದೆಹಲಿ: ಬಹುನಿರೀಕ್ಷಿತ ಮಹಿಳಾ ಐಪಿಎಲ್‌ನ ತಂಡಗಳ ಹರಾಜು ಮೂಲಕ ಬಿಸಿಸಿಐ ಮತ್ತೊಂದು ಬಂಪರ್‌ ನಿರೀಕ್ಷೆಯಲ್ಲಿದ್ದು, ತಂಡಗಳ ಖರೀದಿಗೆ ಪುರುಷರ ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳು ಸೇರಿ ಒಟ್ಟು 30 ಸಂಸ್ಥೆಗಳು ರೇಸ್‌ನಲ್ಲಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರತಿ ತಂಡದ ಮೂಲಬೆಲೆ ಕನಿಷ್ಠ 300 ಕೋಟಿ ರು.ಗೆ ನಿಗದಿಯಾಗುವ ಸಾಧ್ಯತೆ ಇದ್ದು, 500-600 ಕೋಟಿ ರು.ಗೆ ತಂಡಗಳು ಮಾರಾಟವಾಗುವ ನಿರೀಕ್ಷೆಯಿದೆ. 5 ತಂಡಗಳ ಘೋಷಣೆ ಜ.25ಕ್ಕೆ ನಡೆಯಲಿದೆ.

Follow Us:
Download App:
  • android
  • ios