ನವದೆಹಲಿ(ಜ.29): ನಾಯಕ ಅರಿಂದಾಮ್‌ ಘೋಷ್‌ ಅಜೇಯ 50 ಮತ್ತು ಅವಿನಾಶ್‌ ಯಾದವ್‌ (62) ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ ರೈಲ್ವೇಸ್‌ ತಂಡ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಗೌರವಾನ್ವಿತ ಮೊತ್ತದತ್ತ ಹೆಜ್ಜೆಯಿಟ್ಟಿದೆ. 

ಇಲ್ಲಿನ ಕರ್ನೈಲ್‌ ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್‌ ‘ಎ’ ಮತ್ತು ‘ಬಿ’ ಗುಂಪಿನ 7ನೇ ಸುತ್ತಿನ ಪಂದ್ಯದ 2ನೇ ದಿನವಾದ ಮಂಗಳವಾರ, ಮಂಜುಕವಿದ ವಾತಾವರಣ ಹಾಗೂ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದ ಕಾರಣ ಸುಮಾರು 4 ಗಂಟೆ ತಡವಾಗಿ ಆಟ ಆರಂಭಗೊಂಡಿತು. 6 ವಿಕೆಟ್‌ಗೆ 98 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ರೈಲ್ವೇಸ್‌, ದಿನದಾಟದ ಮುಕ್ತಾಯಕ್ಕೆ 72 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿದೆ. ಎರಡನೇ ದಿನ ನಡೆದ ಒಟ್ಟಾರೆ 23 ಓವರ್‌ಗಳ ಆಟದಲ್ಲಿ ರೈಲ್ವೇಸ್‌ 62 ರನ್‌ ಗಳಿಸಿದರೆ, ಕರ್ನಾಟಕ ಕೇವಲ ಒಂದು ವಿಕೆಟ್‌ ಉರುಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕದ ವೇಗಕ್ಕೆ ಹಳಿ ತಪ್ಪಿದ ರೈಲ್ವೇಸ್‌!

ಮೊದಲ ದಿನ ಮುರಿಯದ 7ನೇ ವಿಕೆಟ್‌ಗೆ 53 ರನ್‌ಗಳ ಜತೆಯಾಟವಾಡಿದ್ದ ಅರಿಂದಾಮ್‌ ಮತ್ತು ಅವಿನಾಶ್‌ ಮಂಗಳವಾರವೂ ಕರ್ನಾಟಕದ ಬೌಲರ್‌ಗಳನ್ನು ಕಾಡಿದರು. ಕೊನೆಗೂ, ಅವಿನಾಶ್‌ಗೆ ವೇಗಿ ರೋನಿತ್‌ ಮೋರೆ ಪೆವಿಲಿಯನ್‌ ಹಾದಿ ತೋರಿಸಿದ ಪರಿಣಾಮ 115 ರನ್‌ಗಳ ಜತೆಯಾಟ ಕೊನೆಗೊಂಡಿತು.

ಅಮಿತ್‌ ಮಿಶ್ರಾ (10) ಹಾಗೂ ಅರಿಂದಾಮ್‌ (50) 3ನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೊದಲ ದಿನ 6 ವಿಕೆಟ್‌ ಉರುಳಿಸಿ ರೈಲ್ವೇಸ್‌ ತಂಡದ ಬ್ಯಾಟಿಂಗ್‌ ಹಳಿ ತಪ್ಪುವಂತೆ ನೋಡಿಕೊಂಡಿದ್ದ ಕರ್ನಾಟಕ ಬೌಲರ್‌ಗಳು 2ನೇ ದಿನ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಸಂಕ್ಷಿಪ್ತ ಸ್ಕೋರ್‌:

ರೈಲ್ವೇಸ್‌ :160/7 (ಅರಿಂದಾಮ್‌ 50*, ಅವಿನಾಶ್‌ 62)
ಪ್ರತೀಕ್‌ ಜೈನ್‌ 4-29, ಅಭಿಮನ್ಯು ಮಿಥುನ್‌ 2-38, ರೋನಿತ್‌ ಮೋರೆ 1-21)
(ಎರಡನೇ ದಿನದಂತ್ಯಕ್ಕೆ)