ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕ-ಪುದುಚೆರಿ ಮುಖಾಮುಖಿಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆಈ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ ತಂಡ 

ಬೆಂಗಳೂರು(ಡಿ.20): ರಣಜಿ ಟ್ರೋಫಿ ಟೂರ್ನಿಯ ಕರ್ನಾಟಕ ತಂಡವು ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಪುದುಚೆರಿ ಎದುರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ. 2022-23ರ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ 8 ಬಾರಿ ಚಾಂಪಿಯನ್‌ ಕರ್ನಾಟಕ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದು, ಮಂಗಳವಾರದಿಂದ ಆರಂಭವಾದ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ.

ಎಲೈಟ್‌ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ರಾಜ್ಯ ತಂಡ ತವರಿನ ಅಂಗಳದಲ್ಲೇ ನಡೆದ ತನ್ನ ಮೊದಲ ಪಂದ್ಯದಲ್ಲಿ ಸರ್ವೀಸಸ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಗೆಲುವಿನ ನಿರೀಕ್ಷೆಯಲ್ಲಿದ್ದರೂ ಅದಕ್ಕೆ ಸರ್ವೀಸಸ್‌ ಬ್ಯಾಟರ್‌ಗಳು ಅವಕಾಶ ನೀಡಿರಲಿಲ್ಲ. ಆದರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದ ಮೇಲೆ 3 ಅಂಕ ಗಳಿಸಿರುವ ಕರ್ನಾಟಕ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಪುದುಚೇರಿ ಆರಂಭಿಕ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ 132 ರನ್‌ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ತಂಡ ಸತತ 2ನೇ ಸೋಲು ತಪ್ಪಿಸಲು ಎದುರು ನೋಡುತ್ತಿದೆ.

ಪಂದ್ಯ: ಬೆಳಗ್ಗೆ 9.30ಕ್ಕೆ

ಬಾಂಗ್ಲಾ ವಿರುದ್ಧ 2ನೇ ಟೆಸ್ಟ್‌ಗೂ ರೋಹಿತ್‌ ಇಲ್ಲ

ಢಾಕಾ: ಕೈಬೆರಳಿನ ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ರೋಹಿತ್‌ ಶರ್ಮಾ ಗುರುವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಏಕದಿನ ಸರಣಿಯ 2ನೇ ಪಂದ್ಯದ ವೇಳೆ ರೋಹಿತ್‌ರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಮುಂಬೈಗೆ ಮರಳಿದ್ದ ಅವರು 3ನೇ ಏಕದಿನ, ಮೊದಲ ಟೆಸ್ಟ್‌ ಪಂದ್ಯಕ್ಕೆ ಗೈರಾಗಿದ್ದರು. ಮುಂದಿನ ವಾರ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ.

ಪಾಕ್‌ ವಿರುದ್ಧ ಕ್ಲೀನ್‌ಸ್ವೀಪ್‌ ಸನಿಹದಲ್ಲಿ ಇಂಗ್ಲೆಂಡ್‌

ಕರಾಚಿ: 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್‌, ಆತಿಥೇಯ ತಂಡದ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ನತ್ತ ದಾಪುಗಾಲಿಟ್ಟಿದೆ. ಮೊದಲ ಇನ್ನಿಂಗ್ಸಲ್ಲಿ 50 ರನ್‌ ಹಿನ್ನಡೆ ಅನುಭವಿಸಿದ್ದ ಪಾಕ್‌ 2ನೇ ಇನ್ನಿಂಗ್‌್ಸನಲ್ಲಿ 216ಕ್ಕೆ ಆಲೌಟಾಯಿತು. ವೃತ್ತಿಬದುಕಿನ ಕೊನೆಯ ಇನ್ನಿಂಗ್ಸಲ್ಲಿ ಅಜರ್‌ ಅಲಿ ಶೂನ್ಯಕ್ಕೆ ಔಟಾದರು. 167 ರನ್‌ ಗುರಿ ಪಡೆದ ಇಂಗ್ಲೆಂಡ್‌ 3 ದಿನದಂತ್ಯಕ್ಕೆ 17 ಓವರಲ್ಲಿ 2 ವಿಕೆಟ್‌ಗೆ 112 ರನ್‌ ಗಳಿಸಿದ್ದು, ಇನ್ನು ಕೇವಲ 55 ರನ್‌ ಬೇಕಿದೆ.

ಟೆಸ್ಟ್‌ ವಿಶ್ವಕಪ್‌: ಬಾಂಗ್ಲಾ ಮಣಿಸಿ 2ನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

5 ವಿಕೆಟ್‌: ಇಂಗ್ಲೆಂಡ್‌ನ 18ರ ರಿಹಾನ್‌ ದಾಖಲೆ

ಇಂಗ್ಲೆಂಡ್‌ನ ಯುವ ಸ್ಪಿನ್ನರ್‌ ರಿಹಾನ್‌ ಅಹ್ಮದ್‌ 5 ವಿಕೆಟ್‌ ಗೊಂಚಲು ಪಡೆದಿದ್ದು, ಚೊಚ್ಚಲ ಪಂದ್ಯದಲ್ಲೇ ಈ ಸಾಧನೆ ಮಾಡಿದ ಅತಿಕಿರಿಯ(18 ವರ್ಷ 126 ದಿನ) ಬೌಲರ್‌ ಎಂಬ ದಾಖಲೆ ಬರೆದಿದ್ದಾರೆ. ಈವರೆಗೆ ಈ ದಾಖಲೆ ಪ್ಯಾಟ್‌ ಕಮಿನ್ಸ್‌ ಹೆಸರಲ್ಲಿತ್ತು. ಅವರು 18 ವರ್ಷ, 193 ದಿನ ಪ್ರಾಯವಿದ್ದಾಗ ಚೊಚ್ಚಲ ಪಂದ್ಯದಲ್ಲಿ 6 ವಿಕೆಟ್‌ ಪಡೆದಿದ್ದರು.

ಮಹಿಳಾ ಕ್ರಿಕೆಟ್: ಇಂದು ಭಾರತ-ಆಸ್ಟ್ರೇಲಿಯಾ 5ನೇ ಟಿ20

ಮುಂಬೈ: ಭಾರತ ಹಾಗೂ ಆಸ್ಪ್ರೇಲಿಯಾ ಮಹಿಳಾ ತಂಡಗಳ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. 1-3ರಲ್ಲಿ ಸರಣಿ ಕೈಚೆಲ್ಲಿರುವ ಹರ್ಮನ್‌ಪ್ರೀತ್‌ ಪಡೆ ಕೊನೆ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. 

ಪಂದ್ಯ: ಸಂಜೆ 7ಕ್ಕೆ