Asianet Suvarna News Asianet Suvarna News

Ranji Trophy ಪುದುಚೆರಿ ಎದುರು ಕರ್ನಾಟಕಕ್ಕೆ ಇನಿಂಗ್ಸ್‌ ಗೆಲುವು..!

ಪ್ರಸಕ್ತ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಕರ್ನಾಟಕ
ಪುದುಚೆರಿ ಎದುರು ಇನಿಂಗ್ಸ್‌ ಹಾಗೂ 7 ರನ್‌ಗಳ ಜಯ ದಾಖಲಿಸಿದ ರಾಜ್ಯ ತಂಡ
ಬೌಲಿಂಗ್‌ನಲ್ಲಿ ಮಿಂಚಿದ ರೋನಿತ್ ಮೋರೆ, ವಿದ್ವತ್ ಕಾವೇರಪ್ಪ

Ranji Trophy Karnataka Thrash Puducherry by innings and 7 runs kvn
Author
First Published Dec 22, 2022, 3:02 PM IST

ಬೆಂಗಳೂರು(ಡಿ.22): ವಿದ್ವತ್ ಕಾವೇರಪ್ಪ ಹಾಗೂ ರೋಹಿತ್ ಮೋರೆ ಮಾರಕ ದಾಳಿ ಮತ್ತು ರವಿಕುಮಾರ್ ಸಮರ್ಥ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಪುದುಚೆರಿ ಎದುರು ಆಲ್ರೌಂಡ್ ಪ್ರದರ್ಶನ ತೋರಿದ ಕರ್ನಾಟಕ ತಂಡವು ಇನಿಂಗ್ಸ್ ಹಾಗೂ 7 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎಲೈಟ್ 'ಸಿ' ಗುಂಪಿನಲ್ಲಿ ಕರ್ನಾಟಕ ತಂಡವು 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 53 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಎರಡನೇ ಇನಿಂಗ್ಸ್‌ ಆರಂಭಿಸಿದ ಪುದುಚೆರಿ ತಂಡವು ಮೂರನೇ ದಿನ ತನ್ನ ಖಾತೆಗೆ 74 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಪುದುಚೆರಿಯ ಯಾವೊಬ್ಬ ಬ್ಯಾಟರ್‌ ಕೂಡಾ 26+ ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಂಕಿತ್ ಶರ್ಮಾ 15 ಎಸೆತಗಳಲ್ಲಿ 6 ಬೌಂಡರಿ ಸಹಿತ 25 ರನ್‌ ಬಾರಿಸಿದರಾದರೂ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್ ನೀಡಲಿಲ್ಲ. 

ಇನ್ನುಳಿದಂತೆ ಕರ್ನಾಟಕ ತಂಡದ ಪರ ರೋನಿತ್ ಮೋರೆ 36 ರನ್ ನೀಡಿ 4 ವಿಕೆಟ್ ಪಡೆದರೆ, ವಿಜಯ್‌ಕುಮಾರ್ ವೈಶಾಕ್ 3, ವಿದ್ವತ್ ಕಾವೇರಪ್ಪ 2 ಹಾಗೂ ಕೃಷ್ಣಪ್ಪ ಗೌತಮ್ ಒಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

Ranji Trophy: ಸಮರ್ಥ್‌ ಆಕರ್ಷಕ ಶತಕ, ಕರ್ನಾಟಕ ಗೆಲುವಿನತ್ತ ದಾಪುಗಾಲು

ಇದಕ್ಕೂ ಮೊದಲು ಪುದುಚೆರಿ ತಂಡವು ಮೊದಲು ಬ್ಯಾಟಿಂಗ್ ಮಾಡಿ 170 ರನ್‌ ಗಳಿಸಿ ಸರ್ವಪತನ ಕಂಡಿತ್ತು. ಕರ್ನಾಟಕ ಪರ ಶಿಸ್ತು ಬದ್ದ ದಾಳಿ ನಡೆಸಿದ ವಿದ್ವತ್ ಕಾವೇರಪ್ಪ 4 ಬಲಿ ಪಡೆದರೆ, ವಿ. ವೈಶಾಕ್ 3, ರೋನಿತ್ ಮೋರೆ 2 ಹಾಗೂ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಪಡೆದರು. ಇನ್ನು ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್‌್ಸನಲ್ಲಿ ಕರ್ನಾಟಕ 304 ರನ್‌ಗೆ ಆಲೌಟಾಗಿ, 134 ರನ್‌ ಲೀಡ್‌ ಪಡೆಯಿತು. 

ಮೊದಲ ದಿನ 1 ವಿಕೆಟ್‌ಗೆ 111 ರನ್‌ ಗಳಿಸಿದ್ದ ರಾಜ್ಯ ತಂಡ ಬುಧವಾರವೂ ಉತ್ತಮ ಆಟವಾಡಿತು. ಸತತ 2ನೇ ಶತಕ ಸಿಡಿಸಿದ ಆರ್‌.ಸಮರ್ಥ್‌ 137 ರನ್‌ಗೆ ಔಟಾದರೆ, ಮನೀಶ್‌ ಪಾಂಡೆ 45, ನಿಕಿನ್‌ ಜೋಸ್‌ 30 ರನ್‌ ಕೊಡುಗೆ ನೀಡಿದರು. ತಂಡದ ಕೊನೆ 5 ವಿಕೆಟ್‌ 24 ರನ್‌ಗಳಿಗೆ ಪತನಗೊಂಡಿತು. ಅಂಕಿತ್‌ ಶರ್ಮಾ 6 ವಿಕೆಟ್‌ ಪಡೆದರು. ಪುದುಚೇರಿ ತನ್ನ 2ನೇ ಇನ್ನಿಂಗ್‌್ಸನಲ್ಲೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು.

Follow Us:
Download App:
  • android
  • ios