ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಾಖಂಡ ಎದುರು ಕರ್ನಾಟಕ ಮೇಲುಗೈಮೊದಲ ಇನಿಂಗ್ಸ್‌ನಲ್ಲಿ ಕೇವಲ 116 ರನ್‌ಗಳಿಗೆ ಸರ್ವಪತನ ಕಂಡ ಉತ್ತರಾಖಂಡಮೊದಲ ದಿನವೇ ಇನಿಂಗ್ಸ್‌ ಮುನ್ನಡೆ ಸಾಧಿಸಿದ ಮಯಾಂಕ್‌ ಅಗರ್‌ವಾಲ್ ಪಡೆ

ಬೆಂಗಳೂರು(ಫೆ.01): ಚೊಚ್ಚಲ ಪಂದ್ಯವಾಡುತ್ತಿರುವ ಮುರಳೀಧರ ವೆಂಕಟೇಶ್‌ ಮಾರಕ ಬೌಲಿಂಗ್‌ ನೆರವಿನಿಂದ ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನವೇ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಆರಂಭದಲ್ಲೇ ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ ರಾಜ್ಯ ತಂಡ ಉತ್ತರಾಖಂಡವನ್ನು ಕೇವಲ 116 ರನ್‌ಗೆ ನಿಯಂತ್ರಿಸಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕ ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 123 ರನ್‌ ಕಲೆ ಹಾಕಿದ್ದು, 7 ರನ್‌ ಮುನ್ನಡೆ ಸಾಧಿಸಿದೆ.

ನಿರೀಕ್ಷೆಯಂತೆಯೇ ಟಾಸ್‌ ಗೆದ್ದು ಬೌಲಿಂಗ್‌ ಆರಂಭಿಸಿದ ಮಯಾಂಕ್‌ ಅಗರ್‌ವಾಲ್‌ ಬಳಗ ಆರಂಭದಲ್ಲೇ ಯಶಸ್ಸು ಪಡೆಯಿತು. 5 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡ ಬಳಿಕ ಉತ್ತರಾಖಂಡ ಪುಟಿದೇಳುವ ಮುನ್ಸೂಚನೆ ನೀಡಿದರೂ ಅದಕ್ಕೆ ರಾಜ್ಯದ ವೇಗಿಗಳು ಅವಕಾಶ ನೀಡಲಿಲ್ಲ. ನಾಯಕ ಜೀವನ್‌ಜೋತ್‌ ಸಿಂಗ್‌ 1 ರನ್‌ಗೆ ಔಟಾದರೆ, ಕುನಾಲ್‌ ಚಂಡೇಲಾ(31) ಹಾಗೂ ಅವ್‌ನೀಶ್‌(17) ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. 47ಕ್ಕೆ ಪ್ರಮುಖ 4 ವಿಕೆಟ್‌ ಕಳೆದುಕೊಂಡ ಬಳಿಕ ತಂಡ ಚೇತರಿಕೆ ಕಾಣಲಿಲ್ಲ. 55.4 ಓವರ್‌ ಆಡಿದ ಉತ್ತರಾಖಂಡ 116 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಕೌಶಿಕ್‌ ಬದಲ ತಂಡದಲ್ಲಿ ಸ್ಥಾನ ಪಡೆದಿದ್ದ ವೆಂಕಟೇಶ್‌ 36ಕ್ಕೆ 5 ವಿಕೆಟ್‌ ಕಿತ್ತು ಪಾದಾರ್ಪಣಾ ಪಂದ್ಯವನ್ನು ಅವಿಸ್ಮರಣೀಯಗೊಳಿಸಿದರು. ವಿದ್ವತ್‌ ಕಾವೇರಪ್ಪ, ಕೆ.ಗೌತಮ್‌ ತಲಾ 2, ವೈಶಾಕ್‌ 1 ವಿಕೆಟ್‌ ಕಬಳಿಸಿದರು.

ಮಯಾಂಕ್‌, ಸಮರ್ಥ್ ಫಿಫ್ಟಿ

ಬಳಿಕ ಇನ್ನಿಂಗ್ಸ್ ಆರಂಭಿಸಿದ ರಾಜ್ಯ ತಂಡಕ್ಕೆ ಮಯಾಂಕ್‌ ಹಾಗೂ ಸಮರ್ಥ್ ಭರ್ಜರಿ ಆರಂಭ ಒದಗಿಸಿದರು. ಇನ್ನಿಂಗ್ಸ್ ಲೀಡ್‌ ಪಡೆಯಲು ಈ ಜೋಡಿಗೆ ಕೇವಲ 26 ಓವರ್‌ ಸಾಕಾಯಿತು. ಈ ಋುತುವಿನಲ್ಲಿ 3 ಶತಕ ಸಿಡಿಸಿರುವ ಸಮರ್ಥ್ 54 ರನ್‌ ಗಳಿಸಿದ್ದು, ಮಯಾಂಕ್‌ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ 65 ರನ್‌ ಸಿಡಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: 
ಉತ್ತರಾಖಂಡ ಮೊದಲ ಇನ್ನಿಂಗ್‌್ಸ 116/10
(ಕುನಾಲ್‌ 31, ವೆಂಕಟೇಶ್‌ 5-36, ಕಾವೇರಪ್ಪ 2-17, ಗೌತಮ್‌ 2-22)
ಕರ್ನಾಟಕ 123/0 (ಮಯಾಂಕ್‌ 65*, ಸಮರ್ಥ್ 54*)

ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್‌: ವೆಂಕಟೇಶ್‌ ರಾಜ್ಯದ 11ನೇ ಬೌಲರ್‌

ರಣಜಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ 302ನೇ ಆಟಗಾರ ಎನಿಸಿಕೊಂಡ ವೆಂಕಟೇಶ್‌ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್‌ ಗೊಂಚಲು ಪಡೆದ ರಾಜ್ಯದ 11 ಬೌಲರ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ವಿಜಯಸಾರಥಿ, ಫಿರೋಜ್‌, ಪ್ರಸನ್ನಸಿಂಹ ರಾವ್‌, ಜಿ.ವಿ.ಕುಮಾರ್‌, ಡಿ.ಸುರೇಶ್‌, ಸುರೇಂದ್ರ, ಆರ್‌.ಅನಂತ್‌, ಜಾವಗಲ್‌ ಶ್ರೀನಾಥ್‌, ಅಭಿಮನ್ಯು ಮಿಥುನ್‌, ಎಚ್‌.ಎಸ್‌.ಶರತ್‌ ಕೂಡಾ ಪಾದಾರ್ಪಣಾ ಪಂದ್ಯದಲ್ಲಿ 5+ ವಿಕೆಟ್‌ ಪಡೆದಿದ್ದರು.

ಆಂಧ್ರ 2 ವಿಕೆಟ್‌ಗೆ 262

ಇಂದೋರ್‌: ರಣಜಿ ಟ್ರೋಫಿಯ ಮತ್ತೊಂದು ಕ್ವಾರ್ಟರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ಆಂಧ್ರ 2 ವಿಕೆಟ್‌ಗೆ 262 ರನ್‌ ಕಲೆ ಹಾಕಿದೆ. 58ಕ್ಕೆ 2 ವಿಕೆಟ್‌ ಕಳೆದುಕೊಂಡ ತಂಡಕ್ಕೆ ರಿಕ್ಕಿ ಭುಯಿ ಹಾಗೂ ಕರಣ್‌ ಶಿಂಧೆ ಆಸರೆಯಾದರು. ಹನುಮ ವಿಹಾರಿ ಗಾಯಗೊಂಡ ಹೊರನಡೆದ ಬಳಿಕ ರಿಕ್ಕಿ-ಭುಯಿ ಜೋಡಿ 190 ರನ್‌ ಜೊತೆಯಾಟವಾಡಿತು. ರಿಕ್ಕಿ ಔಟಾಗದೆ 115 ರನ್‌ ಗಳಿಸಿದರೆ, ಕರಣ್‌(83) ಶತಕದತ್ತ ದಾಪುಗಾಲಿಟ್ಟಿದ್ದಾರೆ.

ಸೌರಾಷ್ಟಕ್ಕೆ ಪಾರ್ಥ್ ಆಸರೆ

ರಾಜ್‌ಕೋಟ್‌: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಪಾಥ್‌ರ್‍ ಭುಟ್‌ ಆಕರ್ಷಕ ಶತಕದ ಮೂಲಕ ಸೌರಾಷ್ಟ್ರಕ್ಕೆ ಆಪತ್ಭಾಂಧವರಾದರು. ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದ ಸೌರಾಷ್ಟ್ರ ಒಂದು ಹಂತದಲ್ಲಿ 147ಕ್ಕೆ 7 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಆದರೆಯಾದ ಪಾಥ್‌ರ್‍ ಔಟಾಗದೆ 111 ರನ್‌ ಸಿಡಿಸಿದರು. ತಂಡ 303 ರನ್‌ಗೆ ಆಲೌಟಾಗಿದ್ದು, ಇನ್ನಿಂಗ್‌್ಸ ಆರಂಭಿಸಿದ ಪಂಜಾಬ್‌ ವಿಕೆಟ್‌ ನಷ್ಟವಿಲ್ಲದೇ 3 ರನ್‌ ಗಳಿಸಿದೆ.

ಜಾರ್ಖಂಡ್‌ 173ಕ್ಕೆ ಆಲೌಟ್‌

ಕೋಲ್ಕತಾ: ಮತ್ತೊಂದು ಕ್ವಾರ್ಟರ್‌ ಹಣಾಹಣಿಯಲ್ಲಿ ಬೆಂಗಾಲ್‌ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಜಾರ್ಖಂಡ್‌ 173ಕ್ಕೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ. ಸೂರಜ್‌ ಕುಮಾರ್‌ ಔಟಾಗದೆ 89 ರನ್‌ ಸಿಡಿಸಿ ತಂಡದ ಮಾನ ಕಾಪಾಡಿದರು. ಆಕಾಶ್‌ ದೀಪ್‌ 4, ಮುಕೇಶ್‌ ಕುಮಾರ್‌ 3 ವಿಕೆಟ್‌ ಪಡೆದಿದ್ದಾರೆ.