ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ರಮೇಶ್ ಪೊವಾರ್ಟಿ20 ವಿಶ್ವಕಪ್ ಟೂರ್ನಿ ಆರಂಕ್ಕೆ ಎರಡು ತಿಂಗಳಿರುವಾಗಲೇ ಮಹತ್ವದ ಬದಲಾವಣೆ

ನವದೆಹಲಿ(ಜ.06): ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ರಮೇಶ್ ಪೊವಾರ್, ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್‌ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಮಾಜಿ ಹೆಡ್ ಕೋಚ್ ರಮೇಶ್ ಪೊವಾರ್, ವಿವಿಎಸ್ ಲಕ್ಷ್ಮಣ್ ನೇತೃತ್ವದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇರ್ಪಡೆಯಾಗಿದ್ದಾರೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೇವಲ ಎರಡು ತಿಂಗಳು ಬಾಕಿ ಇರುವಾಗಲೇ ರಮೇಶ್ ಪೊವಾರ್ ತಲೆದಂಡವಾಗಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ. ಇನ್ನು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಹೃಷಿಕೇಶ್ ಕಾನಿಟ್ಕರ್, ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.

ಸದ್ಯಕ್ಕೆ ಬಿಸಿಸಿಐ, ರಮೇಶ್ ಪೊವಾರ್ ಸ್ಥಾನಕ್ಕೆ ಇನ್ನೂ ಬದಲಿ ಹೆಡ್ ಕೋಚ್ ಆಗಿ ಯಾರನ್ನೂ ನೇಮಕ ಮಾಡಿಲ್ಲ. ಹೀಗಾಗಿ ತವರಿನಲ್ಲಿ ಡಿಸೆಂಬರ್ 09ರಿಂದ ಆಸ್ಟ್ರೇಲಿಯಾ ವಿರುದ್ದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಯಾರು ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಮುಂಬರುವ ಫೆಬ್ರವರಿ 10ರಿಂದ ದಕ್ಷಿಣ ಆಫ್ರಿಕಾದಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿಗೂ ಮುನ್ನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಅಭ್ಯಾಸ ನಡೆಸುವ ಉದ್ದೇಶದಿಂದ ಹರ್ಮನ್‌ಪ್ರೀತ್ ಕೌರ್ ಪಡೆ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. 

ರಮೇಶ್ ಪೊವಾರ್ ಎರಡನೇ ಅವಧಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಮೇ 2021ರಲ್ಲಿ ನೇಮಕವಾಗಿದ್ದರು. ಇದಾದ ಬಳಿಕ ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡವು ಗ್ರೂಪ್‌ ಹಂತದಲ್ಲೇ ಸೋತು ಹೊರಬಿದ್ದಿದ್ದರೂ ಸಹಾ, ಮಹಿಳಾ ತಂಡದ ಹೆಡ್ ಕೋಚ್ ಆಗಿ ಮುಂದುವರೆದಿದ್ದರು. ರಮೇಶ್ ಪೊವಾರ್ ಎರಡು ವರ್ಷದ ಅವಧಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದು, ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿರುವ ಮಹಿಳಾ ಟಿ20 ವಿಶ್ವಕಪ್ ಬಳಿಕ ಅವರ ಒಪ್ಪಂದಾವಧಿ ಮುಕ್ತಾಯವಾಗಬೇಕಿತ್ತು. ಆದರೆ ಇದೀಗ ಅವಧಿಗೂ ಮುನ್ನವೇ ರಮೇಶ್ ಪೊವಾರ್ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.

ಅಂಡರ್‌-19 ವಿಶ್ವಕಪ್‌: ಭಾರತಕ್ಕೆ ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ ನಾಯಕಿ

ರಮೇಶ್ ಪೊವಾರ್ ಮಾರ್ಗದರ್ಶನದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಇದಷ್ಟೇ ಅಲ್ಲದೇ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಎನ್‌ಸಿಎಗೆ ಸೇರ್ಪಡೆಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಪೊವಾರ್, "ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್‌ಕೋಚ್ ಆಗಿ ಒಳ್ಳೆಯ ಅನುಭವ ಗಳಿಸಿದ್ದೇನೆ. ಕಳೆದೊಂದು ವರ್ಷದಲ್ಲಿ ದಿಗ್ಗಜ ಆಟಗಾರ್ತಿಯರು ಹಾಗೂ ಭವಿಷ್ಯದ ತಾರಾ ಆಟಗಾರ್ತಿಯರ ಜತೆ ಕೆಲಸ ಮಾಡಿದ್ದೇನೆ. ಇದೀಗ ಎನ್‌ಸಿಎ ಸೇರ್ಪಡೆಗೊಂಡಿದ್ದು, ಭಾರತದ ಭವಿಷ್ಯದ ತಂಡ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಬಲಿಷ್ಠ ತಂಡ ಕಟ್ಟಲು ಹಾಗೂ ಬೆಂಚ್ ಸ್ಟ್ರೆಂಥ್ ಬಲಪಡಿಸುವ ನಿಟ್ಟಿನಲ್ಲಿ ವಿವಿಎಸ್ ಲಕ್ಷ್ಮಣ್ ಜತೆಗೂಡಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ರಮೇಶ್ ಪೊವಾರ್ ಹೇಳಿದ್ದಾರೆ.