Asianet Suvarna News Asianet Suvarna News

PSL Final 2022: ಟಿ20 ಲೀಗ್ ಟ್ರೋಫಿ ಗೆದ್ದ ಅತಿಕಿರಿಯ ನಾಯಕ ಶಾಹೀನ್ ಅಫ್ರಿದಿ..!

* ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಲಾಹೋರ್ ಖಲಂದರ್ಸ್ ಚಾಂಪಿಯನ್

* 21 ವರ್ಷದ ಶಾಹೀನ್ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್‌ ಚಾಂಪಿಯನ್

* ಮುಲ್ತಾನ್ ಸುಲ್ತಾನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿದ  ಶಾಹೀನ್ ಅಫ್ರಿದಿ ಪಡೆ

PSL Final 2022 Shaheen Afridi becomes youngest captain to win T20 league kvn
Author
Bengaluru, First Published Feb 28, 2022, 5:27 PM IST

ಕರಾಚಿ(ಫೆ.28): ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Afridi) ಪ್ರಮುಖ ಟಿ20 ಲೀಗ್‌ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಅತಿಕಿರಿಯ ನಾಯಕ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಹೌದು, 21 ವರ್ಷದ ಶಾಹೀನ್ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ಸ್‌ (Lahore Qalandars) ತಂಡವು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (Pakistan Super League) ಮುಲ್ತಾನ್ ಸುಲ್ತಾನ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಅತಿಕಿರಿಯ ನಾಯಕ ಎನ್ನುವ ದಾಖಲೆಗೆ ಭಾಜನರಾಗಿದ್ದರು. 2012ರಲ್ಲಿ ನಡೆದ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ನಾಯಕರಾಗಿ ಸ್ಟೀವ್ ಸ್ಮಿತ್ (Steve Smith), ಸಿಡ್ನಿ ಸಿಕ್ಸರ್ಸ್‌ (Sydney Sixers) ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಆಗ ಸ್ಟೀವ್ ಸ್ಮಿತ್ ವಯಸ್ಸು 22 ವರ್ಷವಾಗಿತ್ತು.

ಈ ಮೊದಲು ಯಾವುದೇ ಹಂತದ ಕ್ರಿಕೆಟ್‌ ಟೂರ್ನಿಯಲ್ಲಿ ನಾಯಕನಾಗಿ ಕಾರ್ಯ ನಿರ್ವಹಿಸದ ಶಾಹೀನ್ ಅಫ್ರಿದಿಯನ್ನು ಪಿಎಸ್‌ಎಲ್ ಟೂರ್ನಿ ಆರಂಭಕ್ಕೂ ಮುನ್ನ ಲಾಹೋರ್ ಫ್ರಾಂಚೈಸಿಯು ಯುವ ವೇಗಿಗೆ ನಾಯಕ ಪಟ್ಟ ಕಟ್ಟಿದಾಗ ಹಲವರಲ್ಲಿ ಆಶ್ಚರ್ಯ ಮನೆ ಮಾಡಿತ್ತು. ಆದರೆ ಭಾನುವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಮುಕ್ತಾಯದ ಬಳಿಕ ಲಾಹೋರ್ ಫ್ರಾಂಚೈಸಿಯು ಟೂರ್ನಿಗೂ ಮುನ್ನ ತೆಗೆದುಕೊಂಡಿದ್ದ ನಿರ್ಧಾರ ಸರಿಯಾದದ್ದು ಎಂದು ಹಲವರಿಗೆ ಈಗ ಅರ್ಥವಾಗಿದೆ.

ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ (Shahid Afridi) ಕೂಡಾ ಶಾಹೀನ್ ಅಫ್ರಿದಿಯನ್ನು ನಾಯಕನಾಗಿ ಮಾಡಿದ ಲಾಹೋರ್ ಫ್ರಾಂಚೈಸಿಯ ನಿರ್ಧಾರವನ್ನು ಬೆಂಬಲಿಸಿರಲಿಲ್ಲ.  ಸೋದರ ಸಂಬಂಧಿ ಶಾಹೀನ್ ಅಫ್ರಿದಿಗೆ ಮಾಜಿ ನಾಯಕ ಶಾಹೀದ್ ಅಫ್ರಿದಿಯು ಇಷ್ಟು ಬೇಗ ಜವಾಬ್ದಾರಿ ವಯಿಸಿಕೊಳ್ಳುವುದು ಬೇಡ ಎಂದು ಸಲಹೆಯನ್ನು ನೀಡಿದ್ದರು.

ನನ್ನ ಹಾಗೂ ತಂಡದ ಪಾಲಿಗೆ ಪಾಲಿಗೆ ಇದೊಂದು ದೊಡ್ಡ ಸಂತಸದ ಕ್ಷಣ. ಈ ಟ್ರೋಫಿ ಗೆಲುವಿನಲ್ಲಿ ತಂಡದ ಪ್ರತಿಯೊಬ್ಬರು ಕಾಣಿಕೆ ನೀಡಿದ್ದಾರೆ. ಫೈನಲ್‌ ವೀಕ್ಷಿಸಲು 33,000 ಮಂದಿ ನೆರೆದಿದ್ದರು. ಪ್ರೇಕ್ಷಕರು ಆರಂಭದಿಂದಲೂ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದೊಂದು ಅದ್ಭುತ ಅನುಭವ ಎಂದು ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ.

ಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಲಾಹೋರ್ ಖಲಂದರ್ಸ್‌:

2022ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಫೈನಲ್‌ ಪಂದ್ಯಕ್ಕೆ ಲಾಹೋರ್‌ನ ಗಡಾಫಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಪಿಎಸ್‌ಎಲ್ ಟ್ರೋಫಿಗಾಗಿ ಲಾಹೋರ್ ಖಲಂದರ್ಸ್ ಹಾಗೂ ಮುಲ್ತಾನ್ ಸುಲ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಲಾಹೋರ್ ಖಲಂದರ್ಸ್ ತಂಡದ ನಾಯಕ ಶಾಹೀನ್ ಅಫ್ರಿದಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ಆದರೆ ಲಾಹೋರ್ 25 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಹಫೀಜ್(69), ಹ್ಯಾರಿ ಬ್ರೂಕ್‌(41) ಹಾಗೂ ಡೇವಿಡ್ ವೀಸಾ(28) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 180 ರನ್‌ ಕಲೆಹಾಕಿತ್ತು.

IPL 2022: ಕನ್ನಡಿಗನಿಗೆ ಜಾಕ್‌ಪಾಟ್, ಮಯಾಂಕ್‌ ಅಗರ್‌ವಾಲ್‌ಗೆ ಪಂಜಾಬ್ ಕಿಂಗ್ಸ್‌ ನಾಯಕ ಪಟ್ಟ

ಲಾಹೋರ್ ಖಲಂದರ್ಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಮುಲ್ತಾನ್ ಸುಲ್ತಾನ್ಸ್ ತಂಡವು ಕೇವಲ 138 ರನ್‌ಗಳಿಗೆ ಸರ್ವಪತನ ಕಂಡಿತು. ಕುಷ್‌ದಿಲ್ ಶಾ, ಟಿಮ್ ಡೇವಿಡ್ ಹೊರತುಪಡಿಸಿ ಮುಲ್ತಾನ್ ಸುಲ್ತಾನ್ಸ್ ತಂಡದ ಉಳಿದ್ಯಾವ ಆಟಗಾರರು ಕನಿಷ್ಠ 20 ರನ್‌ ಬಾರಿಸಲು ಯಶಸ್ವಿಯಾಗಲಿಲ್ಲ. ನಾಯಕನ ಆಟ ಪ್ರದರ್ಶಿಸಿದ ಶಾಹೀನ್ ಶಾ ಅಫ್ರಿದಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹಫೀಜ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Follow Us:
Download App:
  • android
  • ios