ಓವಲ್ ಟೆಸ್ಟ್‌ನಲ್ಲಿ ಜೋ ರೂಟ್ ಜೊತೆಗಿನ ವಾಗ್ವಾದದ ಬಗ್ಗೆ ಪ್ರಸಿದ್ಧ್ ಕೃಷ್ಣ ವಿವರಣೆ ನೀಡಿದ್ದಾರೆ. ರೂಟ್‌ರನ್ನು ಕೆಣಕುವುದು ತಮ್ಮ ಬೌಲಿಂಗ್‌ಗೆ ಪೂರಕ ಎಂದು ಪ್ರಸಿದ್ಧ್ ತಿಳಿಸಿದ್ದಾರೆ. ಮೈದಾನದ ಹೊರಗೆ ಇಬ್ಬರೂ ಉತ್ತಮ ಸ್ನೇಹಿತರೆಂದೂ ಪ್ರಸಿದ್ಧ್ ಹೇಳಿಕೊಂಡಿದ್ದಾರೆ.
ಓವಲ್: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಎರಡನೇ ದಿನ ಜೋ ರೂಟ್ ಜೊತೆ ವಾಗ್ವಾದಕ್ಕೆ ಇಳಿದಿದ್ದರ ಬಗ್ಗೆ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಕಾರಣ ರಿವೀಲ್ ಮಾಡಿದ್ದಾರೆ. ಜೋ ರೂಟ್ ಕ್ರೀಸ್‌ಗೆ ಬಂದಾಗ ಪ್ರಸಿದ್ಧ್ ಕೃಷ್ಣ, ಜಾಕ್ ಕ್ರಾಲಿ ವಿಕೆಟ್ ಪಡೆದ ನಂತರ ಪಿಚ್ ಮಧ್ಯದಲ್ಲಿ ಇಬ್ಬರೂ ಜಗಳಕ್ಕೆ ಇಳಿದಿದ್ರು. ಪ್ರಸಿದ್ಧ್ ಬೌಲಿಂಗ್‌ನಲ್ಲಿ ಜೋ ರೂಟ್ ಸಿಂಗಲ್ ತೆಗೆದುಕೊಳ್ಳೋಕೆ ಓಡ್ತಿದ್ದಾಗ ಪ್ರಸಿದ್ಧ್ ರೂಟ್ ಕಡೆ ಏನೋ ಹೇಳಿದ್ರು, ರೂಟ್ ಕೂಡ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ರು. ನಂತರ ಅಂಪೈರ್ ಕುಮಾರ್ ಧರ್ಮಸೇನ ಮಧ್ಯಪ್ರವೇಶಿಸಿ, ಧರ್ಮಸೇನ ಮತ್ತು ಕೆ ಎಲ್ ರಾಹುಲ್ ನಡುವೆ ವಾಗ್ವಾದ ನಡೆಯಿತು. ಸಾಮಾನ್ಯವಾಗಿ ಮೈದಾನದಲ್ಲಿ ಶಾಂತ ಸ್ವಭಾವದ ಜೋ ರೂಟ್‌ರನ್ನ ಪ್ರಸಿದ್ಧ್ ಕೆಣಕಿದ್ದಕ್ಕೆ ಟೀಕೆಗಳು ಕೇಳಿಬಂದವು.
ಆದ್ರೆ ಎರಡನೇ ದಿನದ ಆಟದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೂಟ್‌ಗೆ ಏನ್ ಹೇಳಿದ್ದೆ ಅಂತ ಕನ್ನಡಿಗ ಪ್ರಸಿದ್ಧ್ ಕೃಷ್ಣ ರಿವೀಲ್ ಮಾಡಿದ್ರು. ಬೌಲಿಂಗ್ ಮಾಡುವಾಗ ಬ್ಯಾಟ್ಸ್‌ಮನ್‌ಗಳ ಜೊತೆ ಮಾತಾಡೋದು ನನ್ನ ಸ್ಟೈಲ್. ಅವ್ರನ್ನ ಕೆಣಕಿದ್ರೆ ನನ್ನ ಬೆಸ್ಟ್ ಪರ್ಫಾರ್ಮೆನ್ಸ್ ಹೊರಬರತ್ತೆ ಅಂತ ನಂಬಿಕೆ. ಹಾಗಾಗಿ ರೂಟ್‌ರನ್ನ ಕೂಡ ಮಾತಿನಿಂದ ಕೆಣಕೋ ಪ್ಲಾನ್ ಮಾಡಿದ್ದೆ.
ಆರಂಭದಲ್ಲಿ ನನ್ನ ಬಾಲ್‌ಗಳನ್ನ ಆಡೋಕೆ ರೂಟ್ ಕಷ್ಟಪಡ್ತಿದ್ರು, ಆಗ 'ಚೆನ್ನಾಗಿ ಆಡ್ತಿದ್ದೀರ' ಅಂತ ರೂಟ್‌ಗೆ ಹೇಳಿದೆ. ಆದ್ರೆ ಅದಕ್ಕೆ ರೂಟ್ ರಿಯಾಕ್ಷನ್ ಶಾಕ್ ಆಗಿತ್ತು. ಜೋ ರೂಟ್ ಟೆಸ್ಟ್‌ನ ಲೆಜೆಂಡ್ ಆಟಗಾರ. ನನಗೆ ಅವ್ರು ಇಷ್ಟ. ಮೈದಾನದ ಹೊರಗೆ ನಾವು ಒಳ್ಳೆ ಫ್ರೆಂಡ್ಸ್. ಇಬ್ಬರು ಆಟಗಾರರು ತಮ್ಮ ಬೆಸ್ಟ್ ಪರ್ಫಾರ್ಮೆನ್ಸ್ ಕೊಡೋಕೆ ಟ್ರೈ ಮಾಡುವಾಗ ಆಗೋ ಸಣ್ಣ ವಿಷಯ ಅಷ್ಟೇ ಅದು ಅಂತ ಪ್ರಸಿದ್ಧ್ ಹೇಳಿದ್ರು.
ಮಿಂಚಿದ ಪ್ರಸಿದ್ದ್: ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಟೀಂ ಪರ ಆಡುವ ಅವಕಾಶ ಸಿಕ್ಕಿದ್ದರೂ ದುಬಾರಿಯಾಗಿದ್ದ ಪ್ರಸಿದ್ದ್ ಕೃಷ್ಣ ಅವರನ್ನು ಕೆಲ ಪಂದ್ಯಗಳ ಮಟ್ಟಿಗೆ ಕೈಬಿಡಲಾಗಿತ್ತು. ಇದೀಗ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ನೀಳಕಾಯದ ವೇಗಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಪಂದ್ಯದಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡುವಲ್ಲಿ ಪ್ರಸಿದ್ದ್ ಕೃಷ್ಣ ಯಶಸ್ವಿಯಾಗಿದ್ದಾರೆ.
ಓವಲ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನ 224 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ 247 ರನ್‌ಗಳಿಗೆ ಆಲೌಟ್ ಆಯ್ತು. 29 ರನ್ ಗಳಿಸಿದ್ದ ಜೋ ರೂಟ್ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದ್ರು. ಭಾರತ ಪರ ವೇಗಿ ಪ್ರಸಿದ್ದ್ ಕೃಷ್ಣ 62 ರನ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 86 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಆಕಾಶ್‌ದೀಪ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಇನ್ನು ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಅರಂಭಿಸಿದ ಟೀಂ ಇಂಡಿಯಾ, ಆರಂಭದಲ್ಲೇ ಕನ್ನಡಿಗ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸಾಯಿ ಸುದರ್ಶನ್ 11 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿದರು. ಜೈಸ್ವಾಲ್ ಸದ್ಯ 49 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ನೈಟ್ ವಾಚ್‌ಮನ್ ಆಕಾಶ್‌ದೀಪ್ 4 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.
