ಅಡಿಲೇಡ್‌(ಡಿ.19): ಜೋಸ್ ಹೇಜಲ್‌ವುಡ್‌ ಹಾಗೂ ಪ್ಯಾಟ್ ಕಮಿನ್ಸ್‌ ಮಾರಕ ದಾಳಿಗೆ ತರಗೆಲೆಗಳಂತೆ ತತ್ತರಿಸಿಹೋದ ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಹೋರಾಟ ಮುಗಿಸುವ ಮೂಲಕ ನಾಟಕೀಯ ಕುಸಿತ ಕಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಗೆಲ್ಲಲು ರನ್‌ಗಳ ಕೇವಲ 90 ಗುರಿ ನೀಡಿದೆ.

ಎರಡನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಕಳೆದುಕೊಂಡು 9 ರನ್‌ಗಳಿಸಿದ್ದ ಟೀಂ ಇಂಡಿಯಾಗೆ ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ವೇಗಿಗಳಾದ ಜೋಸ್‌ ಹ್ಯಾಜಲ್‌ವುಡ್ ಹಾಗೂ ನಂ.1 ಶ್ರೇಯಾಂಕಿತ ಬೌಲರ್‌ ಪ್ಯಾಟ್ ಕಮಿನ್ಸ್‌ ಆಘಾತ ನೀಡಿದರು. ಆಸ್ಟ್ರೇಲಿಯಾದ ಈ ಇಬ್ಬರು ವೇಗಿಗಳು ಟೀಂ ಇಂಡಿಯಾದ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡಾ ನೆಲಕಚ್ಚಿ ಆಡಲು ಅವಕಾಶ ಮಾಡಿಕೊಡಲಿಲ್ಲ.

ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಹೇಗಿತ್ತು ಎಂದರೆ ಟೀಂ ಇಂಡಿಯಾದ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಶೂನ್ಯ ಸುತ್ತಿದರೆ, ನಾಯಕ ಕೊಹ್ಲಿ ಆಟ ಕೇವಲ 4 ರನ್‌ಗಳಿಗೆ ಸೀಮಿತವಾಯಿತು. ಮಯಾಂಕ್ ಅಗರ್‌ವಾಲ್ ಎರಡನೇ ಇನಿಂಗ್ಸ್‌ನಲ್ಲಿ 9 ರನ್‌ ರನ್‌ ಬಾರಿಸಿದ್ದೇ ಭಾರತ ಪರ ಗರಿಷ್ಠ ಸ್ಕೋರ್ ಎನಿಸಿತು. ಹೇಜಲ್‌ವುಡ್‌ ಕೇವಲ 8 ರನ್‌ ನೀಡಿ 5 ವಿಕೆಟ್ ಪಡೆದರೆ, ಕಮಿನ್ಸ್‌ 21 ರನ್‌ ನೀಡಿ 4 ವಿಕೆಟ್ ಕಬಳಿಸಿದರು. 

ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಕೈಗೆ ಚೆಂಡು ಬಡಿದು ಪೆಟ್ಟು ಮಾಡಿಕೊಂಡಿದ್ದರಿಂದ ಭಾರತ ತನ್ನ ಹೋರಾಟವನ್ನು ಅಂತ್ಯಗೊಳಿಸಿತು.

ಇನಿಂಗ್ಸ್‌ವೊಂದರಲ್ಲಿ ಕನಿಷ್ಠ ಮೊತ್ತ ದಾಖಲಿಸಿದ ಭಾರತ: ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಹೋರಾಟ ಮುಗಿಸುವ ಮೂಲಕ ಕನಿಷ್ಠ ಮೊತ್ತಕ್ಕೆ ಕುಸಿದ ಕುಖ್ಯಾತಿಗೆ ಪಾತ್ರವಾಗಿದೆ. ಈ ಮೊದಲು 1974ರಲ್ಲಿ ಇಂಗ್ಲೆಂಡ್‌ ಎದುರು ಲಾರ್ಡ್ಸ್‌ ಮೈದಾನದಲ್ಲಿ ಟೀಂ ಇಂಡಿಯಾ ಕೇವಲ 42 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದೀಗ ದಾಖಲೆಯನ್ನು ವಿರಾಟ್ ಕೊಹ್ಲಿ ಪಡೆ ಅಳಿಸಿ ಹಾಕಿದೆ.