Asianet Suvarna News Asianet Suvarna News

Pink Ball Test: ಜೂಲನ್-ಪೂಜಾ ಮಿಂಚು, ರೋಚಕ ಘಟ್ಟದತ್ತ ಟೆಸ್ಟ್

* ಕುತೂಹಲ ಘಟ್ಟದತ್ತ ಭಾರತ-ಆಸ್ಟ್ರೇಲಿಯಾ ಪಿಂಕ್‌ ಬಾಲ್ ಟೆಸ್ಟ್

* ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದ ಆಸ್ಟ್ರೇಲಿಯಾ

* ಫಾಲೋ ಆನ್‌ ಬಲೆಯಿಂದ ಪಾರಾಗಲು ಆಸೀಸ್‌ಗೆ ಬೇಕಿದೆ 85 ರನ್ 

Pink Ball Test Jhulan Goswami Pooja Vastrakar shine On Day 3 kvn
Author
Gold Coast QLD, First Published Oct 2, 2021, 6:21 PM IST

ಗೋಲ್ಡ್‌ ಕೋಸ್ಟ್(ಅ.02): ಜೂಲನ್‌ ಗೋಸ್ವಾಮಿ ಹಾಗೂ ಪೂಜಾ ವಸ್ತ್ರಾಕರ್ ಮಿಂಚಿನ ದಾಳಿಗೆ ಆಸ್ಟ್ರೇಲಿಯಾ ಮಹಿಳಾ ತಂಡವು ತಬ್ಬಿಬ್ಬಾಗಿದ್ದು, ಮೂರನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 143 ರನ್‌ ಬಾರಿಸಿದೆ. ಇದರೊಂದಿಗೆ ಪಿಂಕ್ ಬಾಲ್ ಟೆಸ್ಟ್‌ (Pink Ball Test) ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಆಸೀಸ್ ತಂಡವು ಇನ್ನೂ 234 ರನ್‌ಗಳ ಹಿನ್ನೆಡೆಯಲ್ಲಿದೆ. ಆಸ್ಟ್ರೇಲಿಯಾ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 85 ರನ್‌ ಬಾರಿಸಬೇಕಿದೆ

ಸ್ಮೃತಿ ಮಂಧನಾ (Smriti Mandhana) ಆಕರ್ಷಕ ಶತಕ ಹಾಗೂ ದೀಪ್ತಿ ಶರ್ಮಾ ಸಮಯೋಚಿತ ಅರ್ಧಶತಕದ ನೆರವಿನಿಂದ ಮಿಥಾಲಿ ರಾಜ್‌ ಪಡೆ 8 ವಿಕೆಟ್ ಕಳೆದುಕೊಂಡು 377 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಮೂರನೇ ದಿನದಾಟದಲ್ಲಿ ಭಾರತ ತನ್ನ ಖಾತೆಗೆ 101 ರನ್‌ ಬಾರಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಅನುಭವಿ ವೇಗದ ಬೌಲರ್‌ ಜೂಲನ್ ಗೋಸ್ವಾಮಿ (Jhulan Goswami) ಆರಂಭದಲ್ಲೇ ಶಾಕ್‌ ನೀಡಿದರು. ಪಂದ್ಯದ 7ನೇ ಓವರ್‌ನಲ್ಲಿ ಬೆಥ್ ಮೂನಿಯನ್ನು ಕ್ಲೀನ್ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಏಲಿಸಾ ಹೀಲಿ ಹಾಗೂ ಮೆಗ್‌ ಲಾನಿಂಗ್‌ ಜೋಡಿ 49 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಲು ಯತ್ನಿಸಿತು. ಮತ್ತೊಮ್ಮೆ ದಾಳಿಗಿಳಿದ ಜೂಲನ್‌ ವಿಕೆಟ್‌ ಕೀಪರ್‌ ಬ್ಯಾಟರ್‌ ಹೀಲಿಯನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. 

Pink Ball Test: 377 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿದ ಭಾರತ

ಪೂಜಾಗೆ 2 ವಿಕೆಟ್: ಜೂಲನ್‌ ಗೋಸ್ವಾಮಿ ಅವರಿಂದ ಸ್ಪೂರ್ತಿ ಪಡೆದ ಪೂಜಾ ವಸ್ತ್ರಾಕರ್ ಕೂಡಾ ಮಿಂಚಿನ ದಾಳಿ ನಡೆಸುವಲ್ಲಿ ಯಶಸ್ವಿಯಾದರು. ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಆಸೀಸ್‌ ನಾಯಕಿ ಮೆಗ್‌ ಲ್ಯಾನಿಂಗ್ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಪೂಜಾ ಯಶಸ್ವಿಯಾದರು. ಮೆಗ್‌ ಲ್ಯಾನಿಂಗ್ 78 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 38 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಮೆಗ್ ಲ್ಯಾನಿಂಗ್‌ಗೆ ಉತ್ತಮ ಸಾಥ್ ನೀಡಿದ್ದ ತೆಹ್ಲಿಯಾ ಮೆಕ್‌ಗ್ರಾಥ್‌(28) ಕೂಡಾ ಪೂಜಾ ವಸ್ತ್ರಾಕರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿದರು.

ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದ್ದು, ಆದಷ್ಟು ಬೇಗ ಆಸೀಸ್‌ ತಂಡವನ್ನು ಆಲೌಟ್‌ ಮಾಡುವ ಲೆಕ್ಕಾದಲ್ಲಿ ಮಿಥಾಲಿ ಪಡೆಯಿದ್ದರೆ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಆಲೋಚನೆಯಲ್ಲಿದೆ ಆತಿಥೇಯ ಅಸ್ಟ್ರೇಲಿಯಾ ತಂಡ.

ಸಂಕ್ಷಿಪ್ತ ಸ್ಕೋರ್

ಭಾರತ: 377/8

ಆಸ್ಟ್ರೇಲಿಯಾ: 143/4

(* ಮೂರನೇ ದಿನದಾಟ ಮುಕ್ತಾಯದ ವೇಳೆಗೆ)
 

Follow Us:
Download App:
  • android
  • ios