ಅಡಿಲೇಡ್(ಡಿ.19): ಎರಡನೇ ಇನಿಂಗ್ಸ್‌ನಲ್ಲಿ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪರಿಣಾಮ ಇನ್ನೂ 2 ದಿನ ಬಾಕಿ ಇರುವಾಗಲೇ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 1-0 ಮುನ್ನಡೆ ಸಾಧಿಸಿದೆ.

ಹೌದು, ಟೀಂ ಇಂಡಿಯಾ ನೀಡಿದ್ದ ಕೇವಲ 90 ರನ್‌ಗಳ ಗುರಿ ಕಾಂಗರೂ ಪಡೆಗೆ ಸವಾಲು ಎನಿಸಲೇ ಇಲ್ಲ. ಮೊದಲ ವಿಕೆಟ್‌ಗೆ ಮ್ಯಾಥ್ಯೂ ವೇಡ್ ಹಾಗೂ ಜೋ ಬರ್ನ್ಸ್‌ ಜೋಡಿ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ವೇಡ್ 33 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು ಮಾರ್ನಸ್ ಲಬುಶೇನ್ 6 ರನ್ ಬಾರಿಸಿ ಅಶ್ವಿನ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಜೋ ಬರ್ನ್ಸ್‌ ಅಜೇಯ 51 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸುಲಭ ಗೆಲುವು ತಂದಿಟ್ಟಿದ್ದಾರೆ.

ಇದಕ್ಕೂ ಮೊದಲು ಪಿಂಕ್ ಬಾಲ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ ಕಳೆದುಕೊಂಡು 9 ರನ್ ಬಾರಿಸಿದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವೇಗಿಗಳ ಎದುರು ನಾಟಕೀಯ ಕುಸಿತ ಕಂಡಿತು. ತನ್ನ ಖಾತೆಗೆ 6 ರನ್ ಸೇರಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕವೂ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಆಸ್ಟ್ರೇಲಿಯಾ ವೇಗಿಗಳಾದ ಜೋಸ್ ಹೇಜಲ್‌ವುಡ್ ಹಾಗೂ ಪ್ಯಾಟ್‌ ಕಮಿನ್ಸ್ ಇನ್ನಿಲ್ಲದಂತೆ ಕಾಡಿದರು. ಭಾರತದ ಯಾವೊಬ್ಬ ಬ್ಯಾಟ್ಸ್‌ಮನ್ ಸಹಾ ಎರಡಂಕಿ ಮೊತ್ತ ದಾಖಲಿಸಲು ಈ ಇಬ್ಬರು ವೇಗಿಗಳು ಅವಕಾಶ ಮಾಡಿಕೊಡಲಿಲ್ಲ. ಪರಿಣಾಮ ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ತನ್ನ ಎರಡನೇ ಇನಿಂಗ್ಸ್ ಹೋರಾಟ ಮುಗಿಸಿತು.

ಪಿಂಕ್ ಬಾಲ್ ಟೆಸ್ಟ್‌: 36 ರನ್‌ಗಳಿಗೆ ಆಲೌಟ್, ಟ್ರೋಲ್ ಆದ ಟೀಂ ಇಂಡಿಯಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದು ಪಂದ್ಯ ಸೋತ ಕುಖ್ಯಾತಿಗೆ ಪಾತ್ರವಾಗಿದ್ದಾರೆ. ಇದರ ಜತೆಗೆ ವಿರಾಟ್ ಪಡೆ ಕೇವಲ 36 ರನ್‌ಗಳಿಗೆ ಇನಿಂಗ್ಸ್‌ ಮುಗಿಸುವುದರ ಮೂಲಕ ಭಾರತ ಪರ ಅತಿ ಕಡಿಮೆ ಸ್ಕೋರ್ ದಾಖಲಿಸಿದ ತಂಡ ಎನ್ನುವ ಅಪಕೀರ್ತಿಗೂ ಪಾತ್ರವಾಯಿತು.

ಇದಕ್ಕೂ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 244 ರನ್‌ ಬಾರಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 191 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಟೀಂ ಇಂಡಿಯಾ 53 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದರಿಂದ ವಿರಾಟ್ ಪಡೆಗೆ ದಯಾನೀಯ ಸೋಲು ಎದುರಾಗಿದೆ.