Asianet Suvarna News Asianet Suvarna News

ಒಂದು ಎಸೆತ ಉಳಿಸಿ ಇಂಗ್ಲೆಂಡ್ ಪಡೆಯನ್ನು ರೋಚಕವಾಗಿ ಮಣಿಸಿದ ಐರ್ಲೆಂಡ್..!

ಹಾಲಿ ಏಕದಿನ ವಿಶ್ವಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ತಂಡ ಸ್ಮರಣೀಯ ಗೆಲುವು ದಾಖಲಿಸಿದೆ. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಐರ್ಲೆಂಡ್ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Paul Stirling Andrew Balbirnie Century helps Ireland chase 329 to beat England in last over thriller
Author
Southampton, First Published Aug 5, 2020, 9:43 AM IST

ಸೌಥಾಂಫ್ಟನ್(ಆ.05): ಆರಂಭಿಕ ಬ್ಯಾಟ್ಸ್‌ಮನ್ ಪೌಲ್ ಸ್ಟೇರ್ಲಿಂಗ್(142) ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ನಾಯಕ ಆಂಡ್ರ್ಯೂ ಬಲ್ಬ್ರೀನ್(113) ಸಮಯೋಚಿತ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರ ಹೊರತಾಗಿಯೂ ಇಂಗ್ಲೆಂಡ್ 2-1  ಅಂತರದಲ್ಲಿ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ.

ಇಂಗ್ಲೆಂಡ್ ನೀಡಿದ್ದ 329 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಪೌಲ್ ಸ್ಟೆರ್ಲಿಂಗ್ ಹಾಗೂ ಗೆರೆತ್ ಡೆಲ್ನಿ 50 ರನ್‌ಗಳ ಜತೆಯಾಟವಾಡಿದರು. 21 ಎಸೆತಗಳಲ್ಲಿ ಡೆಲ್ನಿ 12 ರನ್ ಬಾರಿಸಿ ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆ ಬಳಿಕ ನಾಯಕ ಬಲ್ಬ್ರೀನ್ ಅವರನ್ನು ಕೂಡಿಕೊಂಡ ಸ್ಟೆರ್ಲಿಂಗ್ ಇಂಗ್ಲೆಂಡ್ ವೇಗಿಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ದ್ವಿಶತಕದ ಜತೆಯಾಟವಾಡುವ ಮೂಲಕ ಹಾಲಿ ವಿಶ್ವಚಾಂಪಿಯನ್ನರ ಬೆವರಿಳಿಸಿದರು. ಸ್ಟೆರ್ಲಿಂಗ್ 128 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 142 ರನ್ ಬಾರಿಸಿ ರನೌಟ್ ಆದರು. ಇನ್ನು ನಾಯಕ ಬಲ್ಬ್ರೀನ್ 112 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 113 ರನ್ ಗಳಿಸಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹ್ಯಾರಿ ಟೆಕ್ಟರ್(29) ಹಾಗೂ ಕೆವಿನ್ ಒಬ್ರಿಯಾನ್(21) ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಧೋನಿಗೆ ಸರಿಸಾಟಿ ಯಾರೂ ಇಲ್ಲವೆಂದ ಹಿಟ್‌ಮ್ಯಾನ್..!

ಇದಕ್ಕೂ ಮೊದಲು ಟಾಸ್ ಗೆದ್ದ ಐರ್ಲೆಂಡ್ ತಂಡ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಐರ್ಲೆಂಡ್ ವೇಗಿ ಕ್ರೇಗ್ ಯಂಗ್ ಮೊದಲ ಓವರ್‌ನಲ್ಲೇ ಜೇಸನ್‌ ರಾಯ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು. ತಂಡದ ಮೊತ್ತ 14 ರನ್‌ಗಳಷ್ಟಾಗುವುದರಲ್ಲಿ ಜಾನಿ ಬೇರ್‌ಸ್ಟೋವ್ ಕೂಡಾ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಇಯಾನ್ ಮಾರ್ಗನ್(106) ಆಕರ್ಷಕ ಶತಕ ಹಾಗೂ ಟಾಮ್ ಬಾಂಟನ್(58) ಮತ್ತು  ಡೇವಿಡ್ ವಿಲ್ಲಿ ಸಮಯೋಚಿತ ಅರ್ಧಶತಕಗಳ ನೆರವಿನಿಂದ ತಂಡ 328 ರನ್ ಗಳಿಸಲು ಉಪಯುಕ್ತ ಕಾಣಿಕೆ ನೀಡಿದರು.
ಪೌಲ್ ಸ್ಟೆರ್ಲಿಂಗ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರೆ, ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದ ಡೇವಿಡ್ ವಿಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ಐರ್ಲೆಂಡ್ ದಾಖಲೆ ಹಾಗೂ ಇಂಗ್ಲೆಂಡ್‌ಗೆ ಮುಖಭಂಗ: ಐರ್ಲೆಂಡ್ ತಂಡ 329 ರನ್ ಗುರಿ ಬೆನ್ನತ್ತುವ ಮೂಲಕ ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ತಂಡ ಗೌರವಕ್ಕೆ ಭಾಜನವಾಗಿತ್ತು. ಇದಕ್ಕೂ ಮೊದಲು ಟೀಂ ಇಂಡಿಯಾ 2002ರಲ್ಲಿ ಲಾರ್ಡ್ಸ್‌ನಲ್ಲಿ 326 ರನ್‌ಗಳ ಗುರಿ ಚೇಸ್ ಮಾಡಿತ್ತು. 

Follow Us:
Download App:
  • android
  • ios