Asianet Suvarna News Asianet Suvarna News

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಶ್ರೀಲಂಕಾ ಬ್ಯಾಟ್ಸ್‌ಮನ್‌ ಎನಿಸಿಕೊಂಡ ಪಥುಮ್‌ ನಿಸ್ಸಾಂಕ!

ಆರಂಭಿಕ ಆಟಗಾರ ಪಥುಮ್‌ ನಿಸ್ಸಾಂಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಶ್ರೀಲಂಕಾದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಫೆಬ್ರವರಿ 9 ರಂದು ಅಫ್ಘಾನಿಸ್ತಾನ ವಿರುದ್ಧ ಬ್ಯಾಟಿಂಗ್ ಮಾಡುವಾಗ ನಿಸ್ಸಾಂಕ ಈ ಸಾಧನೆ ಮಾಡಿದರು.

Pathum Nissanka first Sri Lanka player to hit double century in ODI cricket san
Author
First Published Feb 9, 2024, 7:35 PM IST

ಪಲ್ಲೆಕಿಲೆ (ಫೆ.9): ಶ್ರೀಲಂಕಾದ ಆರಂಭಿಕ ಆಟಗಾರ ಪಥುಮ್‌ ನಿಸ್ಸಾಂಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಶ್ರೀಲಂಕಾದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಪಲ್ಲೆಕಿಲೆಯಲ್ಲಿ ಶುಕ್ರವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ನಿಸ್ಸಾಂಕ ಈ ಸಾಧನೆ ಮಾಡಿದ್ದಾರೆ. ಕೇವಲ 136 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಆ ಬಳಿಕ ಭಾರತದ ಇಶಾನ್‌ ಕಿಶನ್‌ ಹಾಗೂ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ದ್ವಿಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಟಾಸ್‌ ಗೆದ್ದ ಬಳಿಕ ಶ್ರೀಲಂಕಾ ತಂಡಕ್ಕೆ ಮೊದಲು ಬ್ಯಾಟಿಂಗ್‌ ಆಹ್ವಾನ ನೀಡಿದ್ದರು. ಶ್ರೀಲಂಕಾ ತಂಡ ಮೂರು ವಿಕೆಟ್‌ಗಳ ನಷ್ಟಕ್ಕೆ 381 ರನ್‌ಗಳನ್ನು ಪೇರಿಸಿದೆ. ಶ್ರೀಲಂಕಾ ತಂಡದ ಇನ್ನಿಂಗ್ಸ್‌ನಲ್ಲಿ ನಿಸ್ಸಾಂಕ ಅವರ ಬ್ಯಾಟಿಂಗ್‌ ಹೈಲೈಟ್‌ ಆಗಿತ್ತು. ಆರಂಭದಲ್ಲಿ ಆವಿಷ್ಕಾ ಫೆರ್ನಾಂಡೋ ಜೊತೆ ತಾಳ್ಮೆಯ ಆಟವಾಡಿದ ನಿಸ್ಸಾಂಕ ಮೊದಲ ವಿಕೆಟ್‌ಗೆ 26.2 ಓವರ್‌ಗಳಲ್ಲಿ 182 ರನ್‌ ಜೊತೆಯಾಟವಾಡಲು ಕಾರಣರಾದರು. ಈ ಹಂತದಲ್ಲಿ ಆವಿಷ್ಕಾ ಫೆರ್ನಾಂಡೋ 88 ರನ್‌ ಬಾರಿಸಿ ಔಟಾದರು. ಆ ಬಳಿಕ ಅಫ್ಘಾನಿಸ್ತಾನ ತಂಡದ ಬೌಲಿಂಗ್‌ ವಿಭಾಗವನ್ನು ದಂಡಿಸಿದ ನಿಸ್ಸಾಂಕ, ಕೊನೆಗೆ 139 ಎಸೆತಗಳಲ್ಲಿ 210 ರನ್‌ ಬಾರಿಸಿ ಅಜೇಯವಾಗುಳಿದರು.

ಅದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 10ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮ, ಶುಭ್‌ಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಭಾರತದ ಪರವಾಗಿ ಈ ಸಾಧನೆ ಮಾಡಿದ್ದರೆ, ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ನ್ಯೂಜಿಲೆಂಡ್‌ನ ಮಾರ್ಟಿನ್‌ ಗುಪ್ಟಿಲ್‌, ಪಾಕಿಸ್ತಾನದ ಫಖರ್‌ ಜಮಾನ್‌ ಹಾಗೂ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಈ ಸಾಧನೆ ಮಾಡಿದ್ದಾರೆ.

ಇನ್ನಿಂಗ್ಸ್‌ ಮುಕ್ತಾಯವಾದ ಬಳಿಕ ನಿಸ್ಸಾಂಕ ಅವರಿಗೆ ಅಫ್ಘಾನಿಸ್ತಾನ ತಂಡದ ಆಟಗಾರರು ಅಭಿನಂದನೆ ಸಲ್ಲಿಸಿದರು. ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ ಅವರು 20 ಬೌಂಡರಿ ಹಾಗೂ 8 ಸಿಕ್ಸರ್‌ ಸಿಡಿಸಿದ್ದರು. ನಿಸ್ಸಾಂಕ ಅವರ ಅಜೇಯ 210 ರನ್‌, ಪಾಕಿಸ್ತಾನದ ಫಖರ್‌ ಜಮಾನ್‌ ಅವರ ಸ್ಕೋರ್‌ಅನ್ನು ಸರಿಗಟ್ಟಿದೆ. ಫಖರ್‌ ಜಮಾನ್‌, ಜಿಂಬಾಬ್ವೆ ವಿರುದ್ಧ ಈ ಸ್ಕೋರ್‌ ದಾಖಲಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಐದನೇ ಗರಿಷ್ಠ ಮೊತ್ತ ಎನಿಸಿದೆ.

ಅದಲ್ಲದೆ, ಅಫ್ಘಾನಿಸ್ತಾನ ತಂಡ ಏಕದಿನ ಕ್ರಿಕೆಟ್‌ನಲ್ಲಿ ನೀಡಿದ 2ನೇ ದ್ವಿಶತಕ ಎನಿಸಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ನೀಡಿತ್ತು. ಕಳೆದ ವರ್ಷ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಸಾಹಸಿಕ ದ್ವಿಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನ ನೀಡಿದ್ದ 292 ರನ್‌ಗಳ ಗುರಿಯನ್ನು ಬೆನ್ನಟ್ಟಿ ಅಮೋಘ ಗೆಲುವು ಕಂಡಿತ್ತು.

3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್, ಗಾಯಗೊಂಡಿರುವ ಅಯ್ಯರ್‌ ಡೌಟ್!

ಇದಕ್ಕೂ ಮುನ್ನ ಶ್ರೀಲಂಕಾ ಪರವಾಗಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆ ಸನತ್‌ ಜಯಸೂರ್ಯ ಅವರ ಹೆಸರಲ್ಲಿತ್ತು. 2000ದಲ್ಲಿ ಭಾರತ ವಿರುದ್ಧ ಸನತ್‌ ಜಯಸೂರ್ಯ ಬಾರಿಸಿದ್ದ 189 ರನ್‌ ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ನ ಗರಿಷ್ಠ ಮೊತ್ತ ಎನಿಸಿತ್ತು.

ರಣಜಿ ಆಡೆಂದ ಮುಖ್ಯ ಕೋಚ್‌ ದ್ರಾವಿಡ್‌ ಸೂಚನೆ ಮತ್ತೊಮ್ಮೆ ಧಿಕ್ಕರಿಸಿದ ಇಶಾನ್‌ ಐಪಿಎಲ್‌ಗಾಗಿ ಸಿದ್ಧತೆ!

Follow Us:
Download App:
  • android
  • ios