ಕ್ರೈಸ್ಟ್‌ಚರ್ಚ್‌(ಜ.03): ಕೈಲ್ ಜಾಮಿಸನ್ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ಎರಡನೇ ಟೆಸ್ಟ್‌ನ ಮೊದಲ ದಿನವೇ 297 ರನ್‌ ಬಾರಿಸಿ ಆಲೌಟ್ ಆಗಿದೆ. ಯುವವೇಗಿ ಜಾಮಿಸನ್‌ ಕೇವಲ 69 ರನ್‌ ನೀಡಿ 5 ವಿಕೆಟ್‌ ಕಬಳಿಸುವ ಮೂಲಕ ಪ್ರವಾಸಿ ಪಾಕ್‌ ತಂಡಕ್ಕೆ ಮಾರಕವಾಗಿ ಪರಿಣಮಿಸಿದರು.

ಹೌದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಮೊದಲು ಬೌಲಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್‌ ಮಾಡಿದ ಕಿವೀಸ್‌ ವೇಗಿಗಳು ಪಾಕ್‌ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ತಂಡದ ಮೊತ್ತ 83 ರನ್‌ಗಳಾಗುವಷ್ಟರಲ್ಲೇ ಪಾಕಿಸ್ತಾನದ ನಾಲ್ವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. 

ಕಿವೀಸ್‌ ಎದುರು ಪ್ರತಿರೋಧ ತೋರಿದ ಅಜರ್‌, ರಿಜ್ವಾನ್‌: ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿದ್ದ ಪಾಕಿಸ್ತಾನ ತಂಡಕ್ಕೆ ಅಜರ್‌ ಅಲಿ(93) ಹಾಗೂ ನಾಯಕ ಮೊಹಮ್ಮದ್ ರಿಜ್ವಾನ್(61) ಆಸರೆಯಾದರು. ಈ ಜೋಡಿ ಬೇರ್ಪಡಿಸುವಲ್ಲಿ ಜಾಮಿಸನ್ ಯಶಸ್ವಿಯಾದರು. ಇನ್ನು ಫಾಹೀಮ್ ಅಶ್ರಫ್‌(48) ಕೂಡಾ ಕೆಲಕಾಲ ಪ್ರತಿರೋಧ ತೋರುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಸಮೀಪ ಕೊಂಡೊಯ್ದರು.

ಪಾಕ್‌ ವೇಗಿಗಳು ವಯಸ್ಸಿನ ವಂಚನೆ ನಡೆಸಿದ್ದಾರೆ: ಆಸಿಫ್‌ ಸ್ಪೋಟಕ ಹೇಳಿಕೆ

ನ್ಯೂಜಿಲೆಂಡ್ ಪರ ಕೈಲ್ ಜಾಮಿಸನ್‌ 5 ವಿಕೆಟ್‌ ಪಡೆದರೆ, ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದರು. ಇನ್ನು ಮ್ಯಾಟ್ ಹೆನ್ರಿ ಒಂದು ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ಪಾಲಿಗೆ ಕಂಟಕವಾಗಿ ಪರಿಣಮಿಸಿದರು.

ಸ್ಕೋರ್:

ಪಾಕಿಸ್ತಾನ: 297/10(ಮೊದಲ ಇನಿಂಗ್ಸ್)
ಅಜರ್‌ ಅಲಿ: 93
ಕೈಲ್ ಜಾಮಿಸನ್‌: 69/5

(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)