ಜೋಹಾನ್ಸ್‌ಬರ್ಗ್(ಮೇ.26)‌: ದಕ್ಷಿಣ ಆಫ್ರಿ​ಕಾ ಟೆಸ್ಟ್‌ ಕ್ರಿಕೆಟ್‌ ತಂಡದ ನೂತನ ನಾಯ​ಕ​ನಾಗಿ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗಾರ್‌ ನೇಮ​ಕ​ಗೊ​ಳ್ಳುವ ಸಾಧ್ಯತೆ ಇದೆ. ನಾಯ​ಕತ್ವ ವಹಿ​ಸಿ​ಕೊ​ಳ್ಳಲು ಎಲ್ಗಾರ್‌ ಆಸಕ್ತಿ ತೋರಿ​ದ್ದಾರೆ. 

ಫೆಬ್ರ​ವ​ರಿ​ಯಲ್ಲಿ ಫಾಫ್‌ ಡು ಪ್ಲೆಸಿ, ಟೆಸ್ಟ್‌ ತಂಡದ ನಾಯ​ಕತ್ವಕ್ಕೆ ರಾಜೀ​ನಾಮೆ ನೀಡಿ​ದ್ದರು. ಕ್ವಿಂಟನ್‌ ಡಿ ಕಾಕ್‌ಗೆ ನಾಯ​ಕತ್ವ ಪಟ್ಟ ನೀಡುವ ನಿರೀಕ್ಷೆ ಇತ್ತು. ಆದರೆ ಡಿ ಕಾಕ್‌ ಮೇಲೆ ಹೆಚ್ಚಿ​ನ ಹೊರೆ ಹಾಕದಿರಲು ದ.ಆ​ಫ್ರಿಕಾ ಕ್ರಿಕೆಟ್‌ ಮಂಡಳಿ ನಿರ್ಧ​ರಿ​ಸಿದೆ. 

2006ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ವೇಳೆಯಲ್ಲಿ ಡೀನ್ ಎಲ್ಗಾರ್ ದಕ್ಷಿಣ ಆಫ್ರಿಕಾ ಕಿರಿಯರ ತಂಡವನ್ನು ಮುನ್ನಡೆಸಿದ್ದರು. ಇನ್ನು 2017ರಲ್ಲಿ ಕಾಯಂ ನಾಯಕ ಫಾಫ್ ಡುಫ್ಲೆಸಿಸ್ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕನಾಗಿ ಹರಿಣಗಳ ಪಡೆಯನ್ನು ಮುನ್ನಡೆಸಿದ್ದರು. 'ನನಗೆ ಈಗಾಗಲೇ ಶಾಲಾ ಮಟ್ಟದಿಂದ ಹಿಡಿದು ಫ್ರಾಂಚೈಸಿ ಮಟ್ಟದವರೆಗೆ ತಂಡವನ್ನು ಮುನ್ನಡೆಸಿದ ಅನುಭವವಿದೆ. ನಾನು ನಾಯಕತ್ವವನ್ನು ಎಂಜಾಯ್ ಮಾಡುತ್ತೇನೆ. ಹರಿಣಗಳ ತಂಡವನ್ನು ಮುನ್ನಡೆಸುವ ಆಹ್ವಾನ ಬಂದರೆ ನನ್ನಷ್ಟು ಅದೃಷ್ಟವಂತ ಮತ್ತೊಬ್ಬನಿಲ್ಲ' ಎಂದು ಎಲ್ಗಾರ್ ಹೇಳಿದ್ದಾರೆ.

ಈ ಸಲ್ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!

ಏಯ್ಡನ್ ಮಾರ್ಕ್‌ರಮ್ ಹಾಗೂ ಕೇಶವ್ ಮಹರಾಜ್ ಕೂಡ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಜುಲೈ​ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ 3 ಪಂದ್ಯ​ಗಳ ಟೆಸ್ಟ್‌ ಸರಣಿ ನಿಗ​ದಿ​ಯಾ​ಗಿದ್ದು, ಅದಕ್ಕೂ ಮುನ್ನ ನೂತನ ನಾಯ​ಕ ಯಾರು ಎನ್ನು​ವುದು ಬಹಿ​ರಂಗ​ಗೊ​ಳ್ಳ​ಲಿದೆ.