Asianet Suvarna News Asianet Suvarna News

Omicron Threat for IPL 2022: ಪ್ಲ್ಯಾನ್‌ 'ಬಿ' ಗೆ ಬಿಸಿಸಿಐ ಚಿಂತನೆ..!

* ಐಪಿಎಲ್ 2022 ಟೂರ್ನಿಗೆ ಬಿಸಿಸಿಐ ಭರದ ಸಿದ್ದತೆ

* ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ವೈರಸ್‌ ವೇಗವಾಗಿ ಹಬ್ಬುತ್ತಿದೆ

* ಒಮಿಕ್ರೋನ್‌ ಭೀತಿಯಿಂದಾಗಿ ಪ್ಲ್ಯಾನ್‌ ‘ಬಿ’ ಸಿದ್ಧಗೊಳಿಸಲು ಬಿಸಿಸಿಐ ಚಿಂತನೆ

Omicron Threat BCCI Set to Discuss Plan B With Franchises for IPL 2022 kvn
Author
Bengaluru, First Published Dec 24, 2021, 2:19 PM IST

ನವದೆಹಲಿ(ಡಿ.24): ಕೋವಿಡ್‌ ಕಾರಣದಿಂದಾಗಿ (COVID 19) ಕಳೆದೆರಡು ವರ್ಷ ಭಾರತದಾಚೆ ಐಪಿಎಲ್‌ (IPL 2022) ಆಯೋಜಿಸಿದ್ದ ಬಿಸಿಸಿಐ(BCCI), 15ನೇ ಆವೃತ್ತಿಯನ್ನು ಭಾರತದಲ್ಲೇ ನಡೆಸುವುದಾಗಿ ಕಳೆದ ತಿಂಗಳು ಘೋಷಿಸಿತ್ತು. ಆದರೆ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ವೈರಸ್‌ (Omicron Threat) ವೇಗವಾಗಿ ಹಬ್ಬುತ್ತಿರುವ ಕಾರಣ, ಬಿಸಿಸಿಐಗೆ ಆತಂಕ ಶುರುವಾಗಿದೆ. ಮೂಲಗಳ ಪ್ರಕಾರ ಬಿಸಿಸಿಐ ಏಪ್ರಿಲ್‌ 2, 2022ರಿಂದ ಈ ಹಿಂದಿನಂತೆ ಭಾರತದ ವಿವಿಧ ನಗರಗಳಲ್ಲಿ ಟೂರ್ನಿ ಆಯೋಜಿಸಲು ಯೋಜನೆ ರೂಪಿಸಿತ್ತು. ಆದರೆ ಒಮಿಕ್ರೋನ್‌ ಭೀತಿಯಿಂದಾಗಿ ಪ್ಲ್ಯಾನ್‌ ‘ಬಿ’ ಸಿದ್ಧಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ ಎನ್ನಲಾಗಿದ್ದು, ಇದೇ ಕಾರಣದಿಂದಾಗಿ ಮುಂದಿನ ತಿಂಗಳು ಎಲ್ಲಾ 10 ಫ್ರಾಂಚೈಸಿಗಳೊಂದಿಗೆ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.

ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಬಿಸಿಸಿಐ ಇಡೀ ಟೂರ್ನಿಯನ್ನು ಮುಂಬೈ ಹಾಗೂ ಪುಣೆಯಲ್ಲಿ ಆಯೋಜಿಸಲು ಚಿಂತನೆ ನಡೆಸುತ್ತಿದೆ. ಇಲ್ಲವಾದಲ್ಲಿ ಗುಜರಾತ್‌ನ ಅಹಮದಾಬಾದ್‌, ಬರೋಡಾ ಹಾಗೂ ರಾಜ್‌ಕೋಟ್‌ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

ಮೊದಲು ನಿಗದಿಯಾದಂತೆ ಏಪ್ರಿಲ್ 02ರಿಂದ ಚೆನ್ನೈನಲ್ಲಿ 15ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಬೇಕಿದೆ. ಅರ್ಥ ಪಂದ್ಯಗಳು ತವರಿನಲ್ಲಿ ಹಾಗೂ ಇನ್ನರ್ಧ ಪಂದ್ಯಗಳು ತವರಿನಾಚೆ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಒಂದು ವೇಳೆ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ವೈರಸ್‌ ವ್ಯಾಪಕವಾಗಿ ಹಬ್ಬಿದರೆ ಪ್ಲಾನ್ 'ಬಿ'ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ವೈರಸ್‌ ನಿರಂತರವಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಐಪಿಎಲ್ ಆಯೋಜಿಸುವ ಬಿಸಿಸಿಐ ಯೋಜನೆಗೆ ದೊಡ್ಡ ಆತಂಕ ತಂದೊಡ್ಡಿದೆ. ಹೀಗಾಗಿ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಜತೆ ಚರ್ಚೆ ನಡೆಸುವ ಸಾಧ್ಯತೆಯಿದೆ. 

ಯುಎಇಗೆ ಸ್ಥಳಾಂತರ?

2020ರ ಐಪಿಎಲ್‌ ಯುಎಇನಲ್ಲಿ (UAE) ನಡೆದಿತ್ತು. 2021ರಲ್ಲಿ ಭಾರತದಲ್ಲೇ ಆರಂಭಗೊಂಡಿದ್ದ ಟೂರ್ನಿ ಕೋವಿಡ್‌ ಪ್ರಕರಣಗಳು ಪತ್ತೆಯಾದ ಬಳಿಕ ಸ್ಥಗಿತಗೊಂಡಿತ್ತು. ಬಳಿಕ ಯುಎಇಗೆ ಸ್ಥಳಾಂತರಿಸಿ ಬಾಕಿ ಇದ್ದ 31 ಪಂದ್ಯಗಳನ್ನು ನಡೆಸಲಾಗಿತ್ತು. ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾದಲ್ಲಿ 2022ರ ಆವೃತ್ತಿಯೂ ಯುಎಇಗೆ ಸ್ಥಳಾಂತರಗೊಳ್ಳಬಹುದು ಎನ್ನಲಾಗುತ್ತಿದೆ.

ಫೆಬ್ರವರಿ 12,13ಕ್ಕೆ ಬೆಂಗಳೂರಲ್ಲಿ ಐಪಿಎಲ್‌ ಮೆಗಾ ಹರಾಜು

15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಹಾಗೂ 13ಕ್ಕೆ ಬೆಂಗಳೂರಲ್ಲಿ ನಡೆಯಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ ಸುದ್ದಿ ಪ್ರಕಟಿಸಿದೆ. ಗುರುವಾರ ಬಿಸಿಸಿಐ ಅಧಿಕಾರಿಗಳು ಎಲ್ಲಾ 10 ತಂಡಗಳ ಮಾಲಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಫೆಬ್ರವರಿ 11ರ ಸಂಜೆ ವೇಳೆಗೆ ಬೆಂಗಳೂರು ತಲುಪುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಮುಂದಿನ ವಾರ ಅಹಮದಾಬಾದ್‌ ತಂಡವನ್ನು ಖರೀದಿಸಿರುವ ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆಗೆ ಮಾನ್ಯತೆ ನೀಡಲಿದೆ ಎಂದು ತಿಳಿದುಬಂದಿದೆ.

vBreaking News: ಆಟಗಾರರ ಹರಾಜಿನ ಡೇಟ್‌ ಫಿಕ್ಸ್‌, ಬೆಂಗಳೂರಲ್ಲೇ ನಡೆಯಲಿದೆ IPL Auction 2022

ಮೆಗಾ ಹರಾಜಿಗೂ (IPL Mega Auction) ಮುನ್ನ ಈಗಿರುವ ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿಯು ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಇನ್ನುಳಿದಂತೆ ಮುಂಬೈ ಇಂಡಿಯನ್ಸ್‌, ಕೋಲ್ಕತ ನೈಟ್‌ ರೈಡರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ತಲಾ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇನ್ನುಳಿದಂತೆ ಲಖನೌ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳಿಗೆ ಮೆಗಾ ಹರಾಜಿಗೂ ಮುನ್ನ ಮೂವರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿದೆ. 

Follow Us:
Download App:
  • android
  • ios