ದುಬೈ(ಅ.11): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅತ್ತ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿನ ಸೋಲು ಅನುಭವಿಸುತ್ತಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಗೆಲುವನ್ನೇ ಮರೆತಂತಿದೆ. ಕಳೆದ ಪಂದ್ಯದಲ್ಲಿ ಗೆಲ್ಲುವ ಪಂದ್ಯ ಕೈಚೆಲ್ಲಿದ ಬಳಿಕ ನಾಯಕ ರಾಹುಲ್, ತನ್ನ ಬಳಿ ಯಾವುದೇ ಉತ್ತರವಿಲ್ಲ ಎಂದು ಹತಾಷೆ ವ್ಯಕ್ತಪಡಿಸಿದ್ದರು. ಈ ಹಿಂದೆ ಇದೀ ರೀತಿ ಸಂಕಷ್ಟಕ್ಕೆ ಸಿಲುಕಿದ್ದ ಕೆಎಲ್ ರಾಹುಲ್ ಮತ್ತೆ ಕಮ್‌ಬ್ಯಾಕ್ ಮಾಡಲು ನೆರವಾದ ಮಾತೊಂದು ಮತ್ತೆ ವೈರಲ್ ಆಗುತ್ತಿದೆ.

ಕೆಎಲ್ ರಾಹುಲ್ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಬಳಿಕ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮೆಲ್ಬೋರ್ನ್ ಪಂದ್ಯದಲ್ಲಿ ರಾಹುಲ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದು ರಾಹುಲ್ ಚಿಂತೆಗೆ ಕಾರಣವಾಗಿತ್ತು. ಇಷ್ಟೇ ಅಲ್ಲ ಅವಕಾಶ ಕಳೆದುಕೊಳ್ಳುತ್ತೇನೆ ಎಂಬ ಭೀತಿ ಕೂಡ ರಾಹುಲ್‌ ಆವರಿಸಿತ್ತು. ಈ ವೇಳೆ ತನಗೆ ನೆರವಾಗಿದ್ದು ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎಂದು ರಾಹುಲ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನ ಇದೀಗ ವೈರಲ್ ಆಗಿದೆ.

ಮೆಲ್ಬೋರ್ನ್ ಪಂದ್ಯದ ಬಳಿಕ ಡ್ರೆಸ್ಸಿಂಗ್ ಮರಳಿದ ನನಗೆ ಎಲ್ಲವೂ ಭಾರ ಎನಿಸಿತ್ತು. ನನ್ನ ಭವಿಷ್ಯ, ಅವಕಾಶ ಸೇರಿದಂತೆ ಹಲವು ಆಲೋಚನೆ, ಭೀತಿ ಆವರಿಸಿತ್ತು. ನನ್ನ ಪ್ರದರ್ಶನದಿಂದ ವಿಚಲಿತನಾಗಿದ್ದೇನೆ ಅನ್ನೋದನ್ನು ಕೊಹ್ಲಿ ಗಮನಿಸಿದ್ದಾರೆ. ಬಳಿಕ ನನ್ನ ರೂಂಗೆ ಬಂದ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನನಗೆ ಧೈರ್ಯ ತುಂಬಿದ್ದಾರೆ. ಯಾವುದೇ ಕಾರಣನ್ನು ನಿನನ್ನು ನೆಲಕ್ಕಪ್ಪಳಿಸಲು ಅವಕಾಶ ನೀಡುವುದಿಲ್ಲ ಎಂದರು. ಬಳಿಕ ಹೊರಗಡೆ ಕರೆದುಕೊಂಡು ಹೋಗಿ ಹೊಸ ಉಲ್ಲಾಸ ತುಂಬಿದ್ದರು. ಅವರ ಮಾತುಗಳು ನನ್ನಲ್ಲಿ ಹೊಸ ಚೈತನ್ಯ ಮೂಡಿಸಿತು. ಕೊಹ್ಲಿ ಹಾಗೂ ಅನುಷ್ಕಾ ನೆರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸಂದರ್ಶನದಲ್ಲಿ ರಾಹುಲ್ ಹೇಳಿದ್ದಾರೆ.