ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಸಂಭ್ರಮದ ನಡುವೆಯೇ, ಮಹಿಳಾ ಕ್ರಿಕೆಟ್ ಕುರಿತು ಸೌರವ್ ಗಂಗೂಲಿ ನೀಡಿದ್ದ ಹಳೆಯ ಹೇಳಿಕೆಯ ವಿಡಿಯೋವೊಂದು ವೈರಲ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡವು 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಮೈದಾನದಲ್ಲಿ ಭಾರತ ಮಹಿಳಾ ತಂಡದ ಅತಿದೊಡ್ಡ ಗೆಲುವು ಎಂದು ಇದನ್ನು ಪರಿಗಣಿಸಲಾಗುತ್ತಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 53 ರನ್‌ಗಳಿಂದ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ಮೂಲಕ ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ವರ್ಷಗಳಿಂದ ಕಾಯುತ್ತಿದ್ದ ಕನಸನ್ನು ನನಸಾಗಿಸಿದೆ. ಆದರೆ, ಈ ಐತಿಹಾಸಿಕ ಸಂಭ್ರಮದ ನಡುವೆ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಯವರ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಗಂಗೂಲಿ ಮಹಿಳೆಯರು ಕ್ರಿಕೆಟ್ ಆಡುವುದರ ಬಗ್ಗೆ ನೀಡಿದ ಹೇಳಿಕೆ ಚರ್ಚೆಯಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸೌರವ್ ಗಂಗೂಲಿ ಹೇಳಿಕೆ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ, ಬಂಗಾಳಿ ಸುದ್ದಿ ವಾಹಿನಿ ಎಬಿಪಿ ಆನಂದದಲ್ಲಿ ಪ್ರಸಾರವಾದ ಹಳೆಯ ಸಂದರ್ಶನದ್ದಾಗಿದೆ. ಸಂಭಾಷಣೆ ವೇಳೆ ಗಂಗೂಲಿ, ಅರ್ಜುನ್ ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ತಮಾಷೆಯಾಗಿ ಮಾತನಾಡುತ್ತಿದ್ದರು. ಆಗ ನಿರೂಪಕಿ ನಗುತ್ತಾ, 'ನಿಮ್ಮ ಮಗಳು ಸನಾ ಕ್ರಿಕೆಟ್ ಆಡಲು ಬಯಸಿದರೆ?' ಎಂದು ಕೇಳಿದರು. ಇದಕ್ಕೆ ಗಂಗೂಲಿ ನಗುತ್ತಲೇ, 'ಮಹಿಳೆಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ ಎಂದು ನಾನು ಅವಳಿಗೆ ಹೇಳುತ್ತೇನೆ' ಎಂದಿದ್ದರು. ಆ ಸಮಯದಲ್ಲಿ ಇದನ್ನು ತಮಾಷೆಯಾಗಿ ಹೇಳಿದ್ದರಿಂದ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ, ಭಾರತೀಯ ಮಹಿಳಾ ತಂಡ ವಿಶ್ವಕಪ್ ಗೆದ್ದ ನಂತರ, ಈ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದ್ದು, ಜನರ ನಡುವೆ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಗೆ ಟೀಕೆ
ದೇಶಾದ್ಯಂತ ಜನರು ಸೌರವ್ ಗಂಗೂಲಿಯ ಈ ಹಳೆಯ ಹೇಳಿಕೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಧೈರ್ಯ ಮತ್ತು ಕಠಿಣ ಪರಿಶ್ರಮವಿದ್ದರೆ ಯಾವುದೇ ಗುರಿ ದೂರವಿಲ್ಲ ಎಂದು ಇಂದು ಭಾರತದ ಹೆಣ್ಣುಮಕ್ಕಳು ಸಾಬೀತುಪಡಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ಗೆ ಹೊಸ ಹುರುಪು ತಂದಿದ್ದಕ್ಕಾಗಿ ಮತ್ತು ಯುವ ಆಟಗಾರರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಯಾವಾಗಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಈ ವಿಡಿಯೋ, ಕಾಲ ಬದಲಾದಂತೆ ಕ್ರೀಡೆಯಲ್ಲಿ ಮಹಿಳೆಯರ ಬಗೆಗಿನ ದೃಷ್ಟಿಕೋನ ಎಷ್ಟು ಬದಲಾಗಿದೆ ಎಂದು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ.
