ಸೈನಿ-ಜಡೇಜಾ ಹೋರಾಟ, ದಡ ಸೇರಲಿಲ್ಲ ಭಾರತ; ನ್ಯೂಜಿಲೆಂಡ್‌ಗೆ ಏಕದಿನ ಕಿರೀಟ!
ಇನ್ನೇನು ಪಂದ್ಯ ಸೋತಾಯಿತು, ಸರಣಿ ಕೈಚೆಲ್ಲಿ ಆಯಿತು ಅನ್ನುವಷ್ಟರಲ್ಲೇ ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿ ಪಂದ್ಯ ರೋಚಕ ತಿರುವು ನೀಡಿದ್ದರು. ಹೀನಾಯ ಸೋಲೇ ಗತಿ ಎಂದು ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಹೊಸ ಹುರುಪ ನೀಡಿದ್ದರು. ಆದರೆ ಸೈನಿ ವಿಕೆಟ್ ಪತನದೊಂದಿಗೆ ಭಾರತದ ಕನಸು ನಚ್ಚು ನೂರಾಯಿತು. ಪಂದ್ಯ ಸೋತಿದ್ದಲ್ಲದೇ ಸರಣಿ ಕೈಚೆಲ್ಲಿತು.
ಆಕ್ಲೆಂಡ್(ಫೆ.08): ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿ 8ನೇ ವಿಕೆಟ್‌ಗೆ ನೀಡಿದ ಜೊತೆಯಾಟ ಪಂದ್ಯದ ಚಿತ್ರಣ ಬದಲಿಸಿತು. ಹೀನಾಯ ಸೋಲಿನ ಭೀತಿಯಲ್ಲಿದ್ದ ಟೀಂ ಇಂಡಿಯಾ ಗೆಲುವಿನತ್ತ ಹೆಜ್ಜೆ ಹಾಕಿತ್ತು. 153 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಜಡ್ಡು ಸೈನಿ ಜೊತೆಯಾಟದಿಂದ 229 ರನ್ ಪೇರಿಸಿತು. ಆದರೆ ಸೈನಿ ವಿಕೆಟ್ ಪತನ ಭಾರತಕ್ಕೆ ತೀವ್ರ ಹಿನ್ನಡೆ ತಂದಿತು. ಯಜುವೇಂದ್ರ ಚಹಾಲ್ ಆಸರೆಯಾಗಲಿಲ್ಲ. ಅಂತಿಮವಾಗಿ ರವೀಂದ್ರ ಜಡೇಜಾ ವಿಕೆಟ್ ಪತನದೊಂದಿಗೆ ಭಾರತ 2ನೇ ಏಕದಿನ ಪಂದ್ಯದಲ್ಲಿ ಸೋಲಿಗೆ ಶರಣಾಯಿತು.
ಇದನ್ನೂ ಓದಿ: ಅರ್ಧಶತಕ ಸಿಡಿಸಿ ಭಾರತ ವಿರುದ್ಧ ದಾಖಲೆ ಬರೆದ ರಾಸ್ ಟೇಲರ್!
274 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಪರದಾಡಿತು. ಮಯಾಂಕ್ ಅಗರ್ವಾಲ್ ಕೇವಲ 3 ರನ್ ಸಿಡಿಸಿ ಔಟಾದರು. ಪೃಥ್ವಿ ಶಾ 24 ರನ್ ಕಾಣಿಕೆ ನೀಡಿದರು. 34 ರನ್‌ಗೆ 2 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ನೆರವಾಗಲಿಲ್ಲ.
ಇದನ್ನೂ ಓದಿ: INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!
ಕೊಹ್ಲಿ 15 ರನ್ ಸಿಡಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಹೋರಾಟ ತಂಡಕ್ಕೆ ಕೊಂಚ ಸಮಾಧಾನ ತಂದಿತು. ಕೆಎಲ್ ರಾಹುಲ್ ಹಾಗೂ ಕೇದಾರ್ ಜಾಧವ್ ನಿರಾಸೆ ಮೂಡಿಸಿದರು. ಆದರೆ ರವೀಂದ್ರ ಜಡೇಜಾ ಎಚ್ಚರಿಕೆಯ ಆಟಕ್ಕೆ ಮುಂದಾದರು.
ಹಾಫ್ ಸೆಂಚುರಿ ಸಿಡಿಸಿ ಮಿಂಚಿದ ಶ್ರೇಯಸ್ ಅಯ್ಯರ್ ವಿಕೆಟ್ ಪತನಗೊಂಡಿತು. ಶ್ರೇಯಸ್ 52 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್ 18 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರವೀಂದ್ರ ಜಡೇಜಾ ಹಾಗೂ ನವದೀಪ್ ಸೈನಿ ಹೋರಾಟ ಪಂದ್ಯದ ಗತಿಯನ್ನೇ ಬದಲಿಸಿತು. ಹೀನಾಯ ಸೋಲಿನಲ್ಲಿದ್ದ ಭಾರತ ತಂಡದಲ್ಲಿ ಸಣ್ಣ ಗೆಲುವಿನ ಆಸೆ ಚಿಗುರೊಡೆಯಿತು.
ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ನವದೀಪ್ ಸೈನಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 45 ರನ್ ಸಿಡಿಸಿ ಔಟಾದರು. ಇತ್ತ ರವೀಂದ್ರ ಜಡೇಜಾ ಬ್ಯಾಟಿಂಗ್ ಮುಂದುವರಿಸಿದರು. ಜಡೇಜಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಜಡ್ಡುಗೆ ಉತ್ತಮ ಸಾಥ್ ನೀಡಿದ ಯಜುವೇಂದ್ರ ಚಹಾಲ್ 10 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.
ಅಂತಿಮ ಹಂತದಲ್ಲಿ ಭಾರತದ ಗೆಲುವಿಗೆ 10 ಎಸೆತದಲ್ಲಿ 23 ರನ್ ಅವಶ್ಯಕತೆ ಇತ್ತು. 55 ರನ್ ಸಿಡಿಸಿದ್ದ ರವೀಂದ್ರ ಜಡೇಜಾ ಸಿಕ್ಸರ್ ಹೊಡೆತಕ್ಕೆ ಮುಂದಾದರು. ಆದರೆ ಬಾಲ್ ನೇರವಾಗಿ ಲಾಂಗ್ ಆನ್ ಫೀಲ್ಡರ್ ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ಕೈಸೇರಿತು. ಈ ಮೂಲಕ ಭಾರತ 48.3 ಓವರ್‌ಗಳಲ್ಲಿ 251 ರನ್ ಸಿಡಿಸಿ ಆಲೌಟ್ ಆಯಿತು.
ನ್ಯೂಜಿಲೆಂಡ್ 22ರನ್ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು. ಇಷ್ಟೇ ಅಲ್ಲ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು. ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು.
ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ