ದುಬೈ(ಡಿ.23): ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟಿ20 ರ‍್ಯಾಂಕಿಂಗ್‌ ಪ್ರಕಟಿಸಿದ್ದು, ಕಿವೀಸ್‌ ತಂಡದ ಆಟಗಾರರಾದ ಟಿಮ್ ಸೈಫರ್ಟ್‌ ಹಾಗೂ ಟಿಮ್‌ ಸೌಥಿ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಹೌದು, ಪಾಕಿಸ್ತಾನ ವಿರುದ್ದದ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಟಿಮ್ ಸೈಫರ್ಟ್ 24 ಸ್ಥಾನ ಮೇಲೇರಿ ಇದೇ ಮೊದಲ ಬಾರಿಗೆ 9ನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕ್‌ ವಿರುದ್ದ ತವರಿನ ಸರಣಿಯಲ್ಲಿ ಸೈಫರ್ಟ್‌ 176 ರನ್ ಸಿಡಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಅನುಭವಿ ವೇಗಿ ಟಿಮ್ ಸೌಥಿ 6 ವಿಕೆಟ್ ಕಬಳಿಸುವ ಮೂಲಕ 13ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಪಾಕಿಸ್ತಾನದ ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ ಸರಣಿಯಲ್ಲಿ 140 ರನ್ ಬಾರಿಸುವ ಮೂಲಕ 14 ಸ್ಥಾನ ಮೇಲೇರಿ 32ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಡಾನ್ ಬ್ರಾಡ್ಮನ್‌ ಬ್ಯಾಗಿ ಗ್ರೀನ್ ಕ್ಯಾಪ್ 2.51 ಕೋಟಿ ರುಪಾಯಿಗೆ ಹರಾಜು..!

ಒಟ್ಟಾರೆ ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ಮಲಾನ್, ಬಾಬರ್ ಅಜಂ, ಕೆ.ಎಲ್ ರಾಹುಲ್, ಆರೋನ್ ಫಿಂಚ್, ವ್ಯಾನ್‌ ಡರ್ ಡುಸೇನ್ ಕ್ರಮವಾಗಿ ಮೊದಲ 5 ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಆಫ್ಘಾನಿಸ್ತಾನದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಮೊದಲ ಎರಡು ಸ್ಥಾನಗಳನ್ನು ಹಂಚಿಕೊಂಡಿದ್ದರೆ, ಆದಿಲ್ ರಶೀದ್, ಆಡಂ ಜಂಪಾ ಹಾಗೂ ತಬ್ರೀಜ್ ಸಂಶಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.