ಕಠ್ಮಂಡು(ಡಿ.18): 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನೇಪಾಳ ಕ್ರಿಕೆಟ್ ಸಂಸ್ಥೆಯು ಅನುಭವಿ ಕೋಚ್ ಡೇವಿಡ್ ವಾಟ್ಮೋರ್ ಅವರನ್ನು ತಂಡದ ಹೆಡ್‌ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ನೇಪಾಳ ಕ್ರಿಕೆಟ್‌ ಸಂಸ್ಥೆ ಪತ್ರಿಕಾ ಪ್ರಕಟಣೆ ಮೂಲಕ ಈ ವಿಚಾರ ಖಚಿತಪಡಿಸಿಕೊಂಡಿದೆ. 

ವಾಟ್ಮೋರ್ ಮುಂದಿನ ಸವಾಲೆಂದರೆ, 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನೇಪಾಳ ತಂಡ ಅರ್ಹತೆಗಿಟ್ಟಿಸಿಕೊಳ್ಳುವಂತೆ ಮಾಡಬೇಕಿದೆ. 2021ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ನೇಪಾಳ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾಗಿದೆ. ಇನ್ನು 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು. ಈ ಟೂರ್ನಿಗೆ ನೇಪಾಳ ತಂಡವನ್ನು ಅರ್ಹತೆಗಿಟ್ಟಿಸಿಕೊಳ್ಳಂತೆ ಮಾಡಬೇಕಾದ ಅತಿ ದೊಡ್ಡ ಜವಾಬ್ದಾರಿ ವಾಟ್ಮೋರ್ ಮುಂದಿದೆ.

ಬಿಸಿಸಿಐ ಉಪಾಧ್ಯಕ್ಷರಾಗಿ ರಾಜೀವ್‌ ಶುಕ್ಲಾ ಆಯ್ಕೆ ಖಚಿತ?

ಡೇವ್ ವಾಟ್ಮೋರ್ ಹೊಸ ಸವಾಲನ್ನು ಎದುರಿಸಲು ಸಾಕಷ್ಟು ಉತ್ಸುಕರಾಗಿದ್ದು, ನೇಪಾಳದಲ್ಲಿರುವ ಪ್ರತಿಭಾನ್ವಿತ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಎದುರು ನೋಡುತ್ತಿದ್ದಾರೆ. ಸುಂದರ ದೇಶ ನೇಪಾಳದಲ್ಲಿ ಯುವ ಕ್ರಿಕೆಟಿಗರೊಂದಿಗೆ ಹೊಸ ಸವಾಲನ್ನು ಎದುರಿಸಲು ಡೇವ್ ಸಿದ್ದರಾಗಿದ್ದಾರೆ ಎಂದು ನೇಪಾಳ ಕ್ರಿಕೆಟ್‌ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅತ್ಯಂತ ಅನುಭವಿ ಕೋಚ್ ಡೇವ್:

ಪ್ರಸ್ತುತ ಕೋಚ್‌ಗಳ ಪೈಕಿ ಡೇವ್ ವಾಟ್ಮೋರ್ ಅತ್ಯಂತ ಅನುಭವಿ ಕೋಚ್ ಆಗಿದ್ದು, ಈಗಾಗಲೇ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಜಿಂಬಾಬ್ವೆ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿರುವ ಅನುಭವ ವಾಟ್ಮೋರ್‌ಗಿದೆ. ವಾಟ್ಮೋರ್ ಕೋಚ್ ಆಗಿದ್ದಾಗ 1996ರಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು 2007ರಲ್ಲಿ ಬಾಂಗ್ಲಾದೇಶ ಕೋಚ್ ಆಗಿದ್ದಾಗ ಬಲಿಷ್ಠ ಭಾರತ ತಂಡವನ್ನು ಮಣಿಸಿ ಲೀಗ್ ಹಂತದಲ್ಲೇ ಹೊರಬೀಳುವಂತೆ ಮಾಡಿತ್ತು. ಪಾಕಿಸ್ತಾನ ಕೋಚ್ ಆಗಿದ್ದಾಗ 2012ರಲ್ಲಿ ಪಾಕಿಸ್ತಾನ ತಂಡ ಏಷ್ಯಾಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಷ್ಟೇ ಅಲ್ಲದೇ ಭಾರತ ಅಂಡರ್ 19 ಕೋಚ್ ಆದ ಅನುಭವವೂ ಡೇವ್ ವಾಟ್ಮೋರ್‌ಗಿದೆ. 2008ರಲ್ಲಿ ವಾಟ್ಮೋರ್‌ ಮಾರ್ಗದರ್ಶನದಲ್ಲಿ ಮಲೇಷ್ಯಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.