* 2022ನೇ ಸಾಲಿನ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಗೆ ಅಧಿಕೃತ ಚಾಲನೆ* ಮೊದಲ ಪಂದ್ಯದಲ್ಲೇ ಮಂಕಡಿಂಗ್‌ಗೆ ಬಲಿಯಾಗಿ ಅಸಭ್ಯ ವರ್ತನೆ ತೋರಿದ ಎನ್. ಜಗದೀಶನ್* ಬೌಲರ್‌ನತ್ತ ತಿರುಗಿ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದ ಆಟಗಾರನಿಗೆ ನೆಟ್ಟಿಗರಿಂದ ಕ್ಲಾಸ್

ಚೆನ್ನೈ(ಜೂ.24): 2022ನೇ ಸಾಲಿನ ತಮಿಳುನಾಡು ಪ್ರೀಮಿಯರ್ ಲೀಗ್ (Tamil Nadu Premier League) ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲ ಪಂದ್ಯವೇ ರೋಚಕ ಸೂಪರ್‌ ಓವರ್‌ ಮೂಲಕ ಫಲಿತಾಂಶ ಹೊರಬಿದ್ದಿದೆ. ಆದರೆ ಮೊದಲ ಪಂದ್ಯದಲ್ಲೇ ಆದ ಒಂದು ಮಂಕಡ್ ರನೌಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮಂಕಡ್‌ಗೆ ಬಲಿಯಾದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ಬ್ಯಾಟರ್ ಎನ್ ಜಗದೀಶನ್‌ ಪೆವಿಲಿಯನ್‌ಗೆ ವಾಪಾಸಾಗುವ ವೇಳೆ ಅಶ್ಲೀಲ ಸನ್ನೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ನೆಲ್ಲಾಯಿ ರಾಯಲ್ ಕಿಂಗ್ಸ್‌ ನೀಡಿದ್ದ 185 ರನ್‌ಗಳ ಗುರಿ ಬೆನ್ನತ್ತಿದ್ದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಇನಿಂಗ್ಸ್‌ನ ನಾಲ್ಕನೇ ಓವರ್‌ ಬೌಲಿಂಗ್ ಮಾಡಲಿಳಿದ ಬಾಬಾ ಅಪರಾಜಿತ್ (Baba Aparajith) ಎಸೆಯಬೇಕಿದ್ದ ಮೊದಲ ಎಸೆತಕ್ಕೂ ಮುನ್ನವೇ ನಾನ್‌ ಸ್ಟ್ರೈಕರ್‌ನಲ್ಲಿದ್ದ ಎನ್‌ ಜಗದೀಶನ್ (N Jagadeesan) ಕ್ರೀಸ್‌ ತೊರೆದು ಮುಂದೆ ಹೋಗಿದ್ದರು. ಈ ಅವಕಾಶವನ್ನು ಬಳಸಿಕೊಂಡ ಬಾಬಾ ಅಪರಾಜಿತ್, ಬೇಲ್ಸ್ ಎಗರಿಸುವ ಮೂಲಕ 'ಮಂಕಡ್' ರನೌಟ್ ಮಾಡಿದರು. ತಾವು ಮಂಕಡ್ ರೀತಿಯಲ್ಲಿ ಔಟಾಗುತ್ತಿದ್ದಂತೆಯೇ ಸಿಟ್ಟಾದ ಎನ್ ಜಗದೀಶನ್ ಸಿಟ್ಟಿನಲ್ಲೇ ತಮ್ಮ ಬೇಸರವನ್ನು ಹೊರಹಾಕುತ್ತಾ ತಮ್ಮ ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಬ್ಯಾಟಿಂಗ್ ಗ್ಲೌಸ್‌ ತೆಗೆಯುವ ಮುನ್ನ ಬೌಲರ್‌ನತ್ತ ತಿರುಗಿ ಮಧ್ಯದ ಬೆರಳು ತೋರಿಸಿದ್ದ ಜಗದೀಶನ್‌, ಮತ್ತೆ ಗ್ಲೌಸ್ ತೆಗೆದ ಬಳಿಕ ಮತ್ತೊಮ್ಮೆ ಮಧ್ಯದ ಬೆರಳು ತೋರಿಸಿ ತಮ್ಮ ಅಸಭ್ಯ ವರ್ತನೆ ತೋರಿದರು. 

ಇನ್ನು ಟಿಎನ್‌ಪಿಎಲ್ ಟೂರ್ನಿಯಲ್ಲಿ ಅಸಭ್ಯ ವರ್ತನೆ ತೋರಿದ್ದ ಜಗದೀಶನ್ ಮೇಲೆ ನೆಟ್ಟಿಗರು ಕಟು ಟೀಕೆಯ ಮೂಲಕ ಕಿವಿ ಹಿಂಡಿದ್ದಾರೆ. ಕ್ರಿಕೆಟ್ ನಿಯಮಗಳನ್ನು ನೀವು ಒಪ್ಪಿಕೊಳ್ಳುವುದಿಲ್ಲ ಎನ್ನುವುದಾದರೇ ಸುಮ್ಮನೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಿಬಿಡಿ ಎಂದು ಜಗದೀಶನ್‌ಗೆ ಕಿವಿ ಮಾತು ಹೇಳಿದ್ದಾರೆ. 

Scroll to load tweet…
Scroll to load tweet…
Scroll to load tweet…
Scroll to load tweet…

ಕ್ರಿಕೆಟ್‌ನ ನೀತಿ-ನಿಯಮಗಳನ್ನು ರೂಪಿಸುವ ಮೇರಿಲ್ಬೋನ್‌ ಕ್ರಿಕೆಟ್‌ ಕ್ಲಬ್‌(ಎಂಸಿಸಿ) ಇತ್ತೀಚೆಗಷ್ಟೆ ಮಂಕಡಿಂಗ್ ವಿಚಾರವಾಗಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ಮಂಕಡಿಂಗ್ ಔಟ್ ಕ್ರೀಡಾಸ್ಪೂರ್ತಿಗೆ ವಿರುದ್ದವಲ್ಲ ಎನ್ನುವ ತೀರ್ಪನ್ನು ನೀಡಿತ್ತು. ಇನ್ಮುಂದೆ ಮಂಕಡಿಂಗ್‌(ಬೌಲರ್‌ ಬೌಲ್‌ ಮಾಡುವ ಮೊದಲೇ ನಾನ್‌ ಸ್ಟ್ರೈಕರ್ ಕ್ರೀಸ್‌ ಬಿಟ್ಟಾಗ ಬೌಲರ್‌ ಮಾಡುವ ರನೌಟ್‌) ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಲ್ಲ. ಮಂಕಡಿಂಗ್‌ ಅನ್ನು ರನೌಟ್‌ ವ್ಯಾಪ್ತಿಗೆ ಪರಿಗಣಿಸಲು ಎಂಸಿಸಿ ನಿರ್ಧರಿಸಿತ್ತು. ಇದರಿಂದ ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚುವರಿ ಲಾಭ ಸಿಗುವುದಕ್ಕೆ ಕಡಿವಾಣ ಹಾಕಿದಂತಾಗಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಮ್ಮೆಯೂ ಸೊನ್ನೆಗೆ ಔಟಾಗಿಲ್ಲ ಟೀಂ ಇಂಡಿಯಾದ ಈ ಕ್ರಿಕೆಟಿಗ..!

ಜಗದೀಶನ್ ವಿಕೆಟ್ ಒಪ್ಪಿಸುವ ಮುನ್ನ 15 ಎಸೆತಗಳನ್ನು ಎದುರಿಸಿ 25 ರನ್ ಗಳಿಸಿದ್ದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನೆಲ್ಲಾಯಿ ರಾಯಲ್ ಕಿಂಗ್ಸ್‌ ತಂಡವು ಸಂಜಯ್ ಯಾದವ್(87) ಹಾಗೂ ಲಕ್ಮೀಶ ಸೂರ್ಯಪ್ರಕಾಶ್(50) ಬಾರಿಸಿದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 184 ರನ್ ಬಾರಿಸಿತ್ತು. ಇನ್ನು ಈ ಗುರಿ ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು ಆರಂಭಿಕ ಬ್ಯಾಟರ್ ಕೌಶಿಕ್ ಗಾಂಧಿ(64), ಸೋನು ಯಾದವ್(34) ಹಾಗೂ ಕೊನೆಯಲ್ಲಿ ಎಸ್‌ ಹರೀಶ್ ಕುಮಾರ್ ಬಾರಿಸಿದ 12 ಎಸೆತಗಳಲ್ಲಿ 26 ರನ್‌ಗಳ ನೆರವಿನಿಂದ ಪಂದ್ಯ ಟೈ ಆಗುವಂತೆ ನೋಡಿಕೊಂಡರು. ಇನ್ನು ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು 9 ರನ್ ಗಳಿಸಿತಾದರೂ, ಈ ಗುರಿಯನ್ನು ಇನ್ನೂ ಒಂದು ಎಸೆತ ಭಾಕಿ ಇರುವಂತೆಯೇ ನೆಲ್ಲಾಯಿ ರಾಯಲ್ ಕಿಂಗ್ಸ್‌ ಗೆಲುವಿನ ನಗೆ ಬೀರಿತು.