* ಲಂಕಾ ವಿರುದ್ದ ಆಕರ್ಷಕ ಅರ್ಧಶತಕ ಚಚ್ಚಿದ ನಯೀಮ್, ಮುಷ್ಫಿಕುರ್* ಲಂಕಾಗೆ ಮೊದಲ ಪಂದ್ಯ ಗೆಲ್ಲಲು 172 ರನ್‌ಗಳ ಗುರಿ* ಅಜೇಯ 57 ರನ್‌ ಬಾರಿಸಿದ ಮುಷ್ಫಿಕುರ್ ರಹೀಮ್

ಶಾರ್ಜಾ(ಅ.24): ಆರಂಭಿಕ ಬ್ಯಾಟರ್ ಮೊಹಮ್ಮದ್ ನಯೀಮ್‌(62) ಹಾಗೂ ಮುಷ್ಫಿಕುರ್ ರಹೀಮ್(57*) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ರನ್‌ ಬಾರಿಸಿದ್ದು, ಶ್ರೀಲಂಕಾ ತಂಡಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಶನಕ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಇನಿಂಗ್ಸ್‌ ಆರಂಭಿಸಿದ ಮೊಹಮ್ಮದ್ ನಯೀಮ್ ಹಾಗೂ ಲಿಟನ್ ದಾಸ್ ಬಾಂಗ್ಲಾದೇಶಕ್ಕೆ ಎಚ್ಚರಿಕೆಯ ಆರಂಭ ಒದಗಿಸಿಕೊಟ್ಟರು. 5.5 ಓವರ್‌ಗಳಲ್ಲಿ ಈ ಜೋಡಿ 40 ರನ್‌ ಕಲೆಹಾಕಿತು. ಲಿಟನ್ ದಾಸ್ 16 ರನ್ ಬಾರಿಸಿ ಲಹಿರು ಕುಮಾರ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಶಕೀಬ್ ಅಲ್ ಹಸನ್‌ ಕೇವಲ 10 ರನ್‌ ಬಾರಿಸಿ ಕರುಣರತ್ನೆ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಬಾಂಗ್ಲಾದೇಶ 7.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 56 ರನ್‌ ಬಾರಿಸಿತ್ತು. 

ನಯೀಮ್‌-ಮುಷ್ಫಿಕುರ್ ಜುಗಲ್ಬಂದಿ: ಕೇವಲ 16 ರನ್‌ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡು ಕೊಂಚ ಆತಂಕಕ್ಕೆ ಒಳಗಾಗಿದ್ದ ಬಾಂಗ್ಲಾದೇಶ ತಂಡಕ್ಕೆ ನಯೀಮ್ ಹಾಗೂ ಮುಷ್ಫಿಕುರ್ ರಹೀಮ್ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 74 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಮೊಹಮ್ಮದ್ ನಯೀಮ್ 52 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 62 ರನ್‌ ಬಾರಿಸಿ ಭಿನುರಾ ಫರ್ನಾಂಡೋ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಿನ ಬ್ಯಾಟಿಂಗ್‌ ನಡೆಸಿದ ಮುಷ್ಫಿಕುರ್ ರಹೀಮ್‌ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಅಜೇಯ 57 ರನ್‌ ಬಾರಿಸಿದರು. ಕೊನೆಯಲ್ಲಿ ಅಫೀಫ್ ಹುಸೈನ್ (7) ಹಾಗೂ ನಾಯಕ ಮೊಹಮದುಲ್ಲಾ(10*) ಬಾರಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು. 

ಶ್ರೀಲಂಕಾ ಪರ ಲಹಿರು ಕುಮಾರ, ಚಮಿಕ ಕರುಣರತ್ನೆ ಹಾಗೂ ಬಿನುರ ಫರ್ನಾಂಡೋ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಬ್ಬರಿಸಿದ್ದ ವನಿಂದು ಹಸರಂಗ ಯಾವುದೇ ವಿಕೆಟ್ ಕಬಳಿಸಲು ಯಶಸ್ವಿಯಾಗಲಿಲ್ಲ.