ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಉಂಟಾದ ಭಿನ್ನಾಭಿಪ್ರಾಯ ತಪ್ಪಿಸಲು ಮುಂಬೈ ಇಂಡಿಯನ್ಸ್ ತಂಡದ ಮಾಲಿಕರು ಹಿರಿಯ ಆಟಗಾರರೊಂದಿಗೆ ಸಭೆ ನಡೆಸಿ ಪಾಂಡ್ಯಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ತಂಡದ ಕಳಪೆ ಪ್ರದರ್ಶನ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳಿಂದ ಪಾಠ ಕಲಿತ ಮಾಲಿಕರು, ೨೦೨೫ರ ಐಪಿಎಲ್‌ಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಮುಂಬೈ: 2025ರ ಐಪಿಎಲ್‌ ಹತ್ತಿರವಾಗುತ್ತಿದ್ದಂತೆ ತಂಡಗಳು ಸಿದ್ಧತೆ ಆರಂಭಿಸಿವೆ. ಕಳೆದ ಆವೃತ್ತಿಯಲ್ಲಿ ಹೊಸ ನಾಯಕನನ್ನು ನೇಮಿಸಿ ಇಕ್ಕಟ್ಟಿಗೆ ಸಿಲುಕಿದ್ದ ಮುಂಬೈ ಇಂಡಿಯನ್ಸ್‌, ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ನಾಯಕ ಹಾರ್ದಿಕ್‌ ಪಾಂಡ್ಯ ಅವರ ಬಗ್ಗೆ ಅಸಡ್ಡೆ ತೋರದಂತೆ, ಅವರನ್ನು ಗೌರವಿಸಿ ಸಂಪೂರ್ಣ ಸಹಕಾರ ನೀಡುವಂತೆ ಕೆಲ ಪ್ರಮುಖ ಆಟಗಾರರಿಗೆ ಸೂಚನೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲ ದಿನಗಳ ಹಿಂದೆ ಪ್ರಮುಖ ಆಟಗಾರರ ಜೊತೆ ಸಭೆ ನಡೆಸಿರುವ ಮುಂಬೈ ತಂಡದ ಮಾಲಿಕರು, ಹಾರ್ದಿಕ್‌ರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಮತ್ತೆ ಅಸಮಾಧಾನದ ಹೊಗೆ?

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಿರಿಯ ಆಟಗಾರರನ್ನು ಕರೆದು ಮಾತುಕತೆ ನಡೆಸಿರುವುದು ಇನ್ನೂ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆಯೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮೈದಾನಕ್ಕಿಳಿಯಲು ರಣತಂತ್ರ ಹೆಣೆಯಲು ಮುಂದಾಗಿದೆ.

ಕಳೆದ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳೇ ಹಾರ್ದಿಕ್ ಪಾಂಡ್ಯ ಅವರನ್ನು ಮೈದಾನದಲ್ಲಿಯೇ ಟ್ರೋಲ್ ಮಾಡಿದ್ದರು. ತಂಡದ ಕಳಪೆ ಪ್ರದರ್ಶನ, ಪ್ರೇಕ್ಷಕರಿಂದಲೂ ಅಸಮಧಾನ ಇವೆಲ್ಲದರಿಂದ ಮುಂಬೈ ತಂಡ ಕುಗ್ಗಿಹೋಗಿತ್ತು. ಇನ್ನು ಇದಾದ ಬಳಿಕ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಮುಂಬೈನಲ್ಲಿ ರೋಡ್‌ ಷೋ ಹಾಗೂ ವಾಂಖೇಡೆ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆಯ ವೇಳೆಯಲ್ಲಿ ಮುಂಬೈ ಫ್ಯಾನ್ಸ್ ಹಾರ್ದಿಕ್ ಪಾಂಡ್ಯ ಬೆನ್ನಿಗೆ ನಿಂತಿದ್ದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಕಳೆದ ಆವೃತ್ತಿಗೂ ಮುನ್ನ ಗುಜರಾತ್‌ ತಂಡದಿಂದ ಹಾರ್ದಿಕ್‌ರನ್ನು ಕರೆತಂದು ರೋಹಿತ್‌ ಶರ್ಮಾ ಬದಲು ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಮಾಲಿಕರ ಈ ನಿರ್ಧಾರ ತಂಡದೊಳಗೆ ಮನಸ್ತಾಪ ಶುರುವಾಗಲು ಕಾರಣವಾಗಿತ್ತು. ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌ ಸಾಮಾಜಿಕ ತಾಣಗಳಲ್ಲಿ ಮಾರ್ಮಿಕ ಸಂದೇಶಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ತಂಡದೊಳಗೆ ರೋಹಿತ್‌ ಬಣ ಹಾಗೂ ಹಾರ್ದಿಕ್‌ ಬಣ ಎಂದು ಎರಡು ಗುಂಪುಗಳು ಹುಟ್ಟಿಕೊಂಡಿವೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಮುಂಬೈ ತಂಡ 14 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ ನಿರಾಸೆ ಮೂಡಿಸಿತ್ತು.

ಕಳೆದ ವರ್ಷದ ಬೆಳವಣಿಗೆಗಳನ್ನು ಗಮನಿಸಿದ್ದ ತಂಡದ ಮಾಲಿಕರು ಈ ಬಾರಿ ಟೂರ್ನಿ ಆರಂಭಕ್ಕೂ ಮೊದಲೇ ಎಚ್ಚೆತ್ತುಕೊಂಡಿದ್ದು, ಪ್ರಮುಖ ಆಟಗಾರರೊಂದಿಗೆ ಮಾತುಕತೆ ನಡೆಸಿ ಸೂಚನೆ ನೀಡಿದ್ದಾರೆ. 2025ರ ಐಪಿಎಲ್‌ ಟೂರ್ನಿಯು ಮಾ.14ರಿಂದ ಆರಂಭಗೊಳ್ಳಲಿದ್ದು, ಮೇ 25ರ ವರೆಗೂ ನಡೆಯಲಿದೆ.

2025ರ ಐಪಿಎಲ್‌ಗೆ ಮುಂಬೈ ಇಂಡಿಯನ್ಸ್ ತಂಡ ಹೀಗಿದೆ:

ಹಾರ್ದಿಕ್ ಪಾಂಡ್ಯ(ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿನ್ಜ್(ವಿಕೆಟ್ ಕೀಪರ್), ಕರ್ಣ್ ಶರ್ಮಾ, ರಿಯನ್ ರಿಕೆಲ್ಟನ್(ವಿಕೆಟ್ ಕೀಪರ್), ದೀಪಕ್ ಚಹರ್, ವಿಲ್ ಜ್ಯಾಕ್ಸ್, ಅಶ್ವನಿ ಕುಮಾರ್, ಮಿಚೆಲ್ ಸ್ಯಾಂಟ್ನರ್, ರೀಸ್ ಟಾಪ್ಲೆ, ಶ್ರೀಜಿತ್ ಕೃಷ್ಣನ್, ರಾಜ್ ಅಂಗದ್ ಭಾವಾ, ಸತ್ಯನಾರಾಯಣ ರಾಜು, ಬೆವೊನ್ ಜೇಕೊಬ್ಸ್, ಅರ್ಜುನ್ ತೆಂಡುಲ್ಕರ್, ಲಿಜ್ಜಾಡ್‌ ವಿಲಿಯಮ್ಸ್, ವಿಘ್ನೇಸ್ ಪುತೋರ್, ಅಲ್ಲಾ ಮೊಹಮ್ಮದ್ ಘಜನ್‌ಫರ್.