ಗಾಯದ ಸಮಸ್ಯೆಯ ಹೊರತಾಗಿಯೂ ಭರ್ಜರಿ ಬ್ಯಾಟ್ ಬೀಸುತ್ತಿರುವ ಧೋನಿಸಿಎಸ್‌ಕೆ ತಂಡಕ್ಕೆ ಶುರುವಾಗಿದೆ ಗಾಯದ ಸಮಸ್ಯೆಧೋನಿ ಗಾಯದ ಬಗ್ಗೆ ತುಟಿಬಿಚ್ಚಿದ ಹೆಡ್‌ಕೋಚ್ ಸ್ಟಿಫನ್ ಫ್ಲೆಮಿಂಗ್
ಚೆನ್ನೈ(ಏ.13): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು 3 ರನ್ ರೋಚಕ ಸೋಲು ಅನುಭವಿಸಿದೆ. ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಹೊರತಾಗಿಯೂ, ಸಿಎಸ್‌ಕೆ ವಿರೋಚಿತ ಸೋಲು ಅನುಭವಿಸಿದೆ. ಮೊದಲೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ಸ್ವತಃ ನಾಯಕ ಮಹೇಂದ್ರ ಸಿಂಗ್ ಧೋನಿ, ಮೊಣಕಾಲಿನ ನೋವಿನ ಶುಶ್ರೂಷೆಯಲ್ಲಿದ್ದಾರೆ ಎಂದು ಸಿಎಸ್‌ಕೆ ತಂಡದ ಹೆಡ್‌ಕೋಚ್ ಸ್ಟಿಫೆನ್ ಫ್ಲೆಮಿಂಗ್ ಹೇಳಿದ್ದಾರೆ.
16ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಮೊಣಕಾಲಿನ ನೋವಿನ ಸಮಸ್ಯೆ ಎದುರಿಸುತ್ತಿದ್ದರು. ಇನ್ನು ವೇಗಿ ದೀಪಕ್ ಚಹರ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಇನ್ನು ಕೈಲ್ ಜೇಮಿಸನ್ ಬದಲಿಗೆ ತಂಡ ಕೂಡಿಕೊಂಡಿದ್ದ ದಕ್ಷಿಣ ಆಫ್ರಿಕಾ ವೇಗಿ ಸಿಸಾಂಡ ಮಗಲಾ ಕೂಡಾ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ಗಾಯಗೊಂಡಿದ್ದು, ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಗಾಯದ ಸಮಸ್ಯೆಯ ಹೊರತಾಗಿಯೂ, ಧೋನಿ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ವೇಳೆ ಅಕ್ಷರಶಃ ಅಬ್ಬರಿಸಿದ್ದಾರೆ.
ಐಪಿಎಲ್ ಹೊರತಾಗಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಬಳಿಕವೂ 41 ವರ್ಷದ ಧೋನಿ, ಫಿಟ್ ಆಗಿರುವುದು ಅವರಿಗೆ ಕ್ರಿಕೆಟ್ ಮೇಲಿರುವ ಬದ್ದತೆಯನ್ನು ತೋರಿಸುತ್ತದೆ ಎಂದು ಸ್ಟಿಫನ್ ಫ್ಲೆಮಿಂಗ್ ಗುಣಗಾನ ಮಾಡಿದ್ದಾರೆ. " ಧೋನಿ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದು, ಶುಶ್ರೂಷೆಯಲ್ಲಿದ್ದಾರೆ. ಓಡುವಾಗ ಅವರಿಗೆ ಇದು ಅಡ್ಡಿಯಾಗುತ್ತಿದೆ. ಆದರೆ ಅವರ ಫಿಟ್ನೆಸ್ ವೃತ್ತಿಪರವಾದದ್ದು. ಅವರು ಟೂರ್ನಿ ಆರಂಭಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ಅವರು ಇಲ್ಲಿಗೆ ಬಂದಿದ್ದರು. ಇದಕ್ಕೂ ಮೊದಲು ರಾಂಚಿಯ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಆದರೆ ಮುಖ್ಯ ಸಿದ್ದತೆಯನ್ನು ಚೆನ್ನೈನಲ್ಲಿಯೇ ನಡೆಸಿದ್ದಾರೆ. ಅವರ ತಯಾರಿಯ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಫ್ಲೆಮಿಂಗ್ ಹೇಳಿದ್ದಾರೆ
ಪಾಕಿಸ್ತಾನದಲ್ಲಿ ಬದುಕುವುದು ಜೈಲಿನಲ್ಲಿ ಬದುಕಿದಂತೆ: ಕರಾಳ ಕ್ಷಣ ಮೆಲುಕುಹಾಕಿದ ಕಿವೀಸ್ ಮಾಜಿ ಕ್ರಿಕೆಟಿಗ
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರಲ್ಲಿ 8 ವಿಕೆಟ್ಗೆ 175 ರನ್ ಕಲೆಹಾಕಿತು. ಚೆನ್ನೈ ತನ್ನ ಎಂದಿನ ಶೈಲಿಯಂತೆ ಪಂದ್ಯವನ್ನು ಕೊನೆ ಎಸೆತದವರೆಗೆ ಕೊಂಡೊಯ್ದರೂ ಅಲ್ಪದರಲ್ಲೇ ಗೆಲುವು ಕೈತಪ್ಪಿತು. 20 ಓವರಲ್ಲಿ 6 ವಿಕೆಟ್ಗೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು.
9 ಓವರ್‌ಗೆ ಮುಕ್ತಾಯಕ್ಕೆ 1 ವಿಕೆಟ್ಗೆ 76 ರನ್ ಗಳಿಸಿದ್ದ ಚೆನ್ನೈ ಬಳಿಕ ಮಂಕಾಯಿತು. ನಂತರದ 7 ಓವರ್ಗಳಲ್ಲಿ 41 ರನ್ ಗಳಿಸಿ ಪ್ರಮುಖ ಐವರನ್ನು ಕಳೆದುಕೊಂಡಿತು. ಕಾನ್ವೇ(50) ಏಕಾಂಗಿ ಹೋರಾಟ ಪ್ರದರ್ಶಿಸಿದರೆ, ಅಜಿಂಕ್ಯಾ ರಹಾನೆ 19 ಎಸೆತಗಳಲ್ಲಿ 31 ರನ್ ಸಿಡಿಸಿ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಆದರೆ ಉಳಿದವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಕೊನೆ 3 ಓವರಲ್ಲಿ 54 ರನ್ ಬೇಕಿದ್ದಾಗ ಧೋನಿ-ಜಡೇಜಾ 18ನೇ ಓವರಲ್ಲಿ 14, 19ನೇ ಓವರಲ್ಲಿ 19 ರನ್ ಸಿಡಿಸಿದರು. ಕೊನೆ 6 ಎಸೆತಗಳಲ್ಲಿ 61 ರನ್ ಅಗತ್ಯವಿತ್ತು. 2 ಮತ್ತು 3ನೇ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರೂ ಕೊನೆ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ವಿಫಲರಾದರು. ಧೋನಿ 17 ಎಸೆತಗಳಲ್ಲಿ 32, ಜಡೇಜಾ 15 ಎಸೆತಗಳಲ್ಲಿ 25 ರನ್ ಸಿಡಿಸಿದರು.
ಏಕಕಾಲಕ್ಕೆ 2.2 ಕೋಟಿ ಮಂದಿ ವೀಕ್ಷಣೆ: ದಾಖಲೆ
ಧೋನಿ-ಜಡೇಜಾ ಬ್ಯಾಟಿಂಗ್ ವೇಳೆ ಜಿಯೋ ಸಿನಿಮಾದಲ್ಲಿ ಏಕಕಾಲಕ್ಕೆ 2.2 ಕೋಟಿ ಮಂದಿ ಪಂದ್ಯ ವೀಕ್ಷಿಸಿದರು. ಇದು ಹೊಸ ದಾಖಲೆ. ಸೋಮವಾರ ಲಖನೌ ವಿರುದ್ಧ ಆರ್ಸಿಬಿಯ ಮ್ಯಾಕ್ಸ್ವೆಲ್-ಡು ಪ್ಲೆಸಿ ಬ್ಯಾಟಿಂಗ್ ಮಾಡುತ್ತಿದ್ದಾಗ 1.8 ಕೋಟಿ ಮಂದಿ ಪಂದ್ಯ ವೀಕ್ಷಿಸಿದ್ದರು.
200 ಬಾರಿ ಚೆನ್ನೈ ನಾಯಕತ್ವ: ಧೋನಿ ದಾಖಲೆ
ಚೆನ್ನೈ: ಐಪಿಎಲ್ನಲ್ಲಿ ಎಂ.ಎಸ್.ಧೋನಿ 200 ಬಾರಿ ಚೆನ್ನೈ ಸೂಪರ್ ಕಿಂಗ್‌್ಸ ತಂಡಕ್ಕೆ ನಾಯಕತ್ವ ವಹಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ತಂಡವನ್ನು ಮುನ್ನಡೆಸುವ ಮೂಲಕ ಅವರು ಈ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯಕ್ಕೂ ಮುನ್ನ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
2008ರ ಮೊದಲ ಆವೃತ್ತಿಯಿಂದಲೂ ಧೋನಿ ಚೆನ್ನೈಗೆ ನಾಯಕತ್ವ ವಹಿಸುತ್ತಿದ್ದು, ಈವರೆಗಿನ 199 ಪಂದ್ಯಗಳಲ್ಲಿ ಚೆನ್ನೈ 120ರಲ್ಲಿ ಜಯಗಳಿಸಿ, 78ರಲ್ಲಿ ಸೋಲನುಭವಿಸಿದೆ. 2016-17ರಲ್ಲಿ ಚೆನ್ನೈ ಐಪಿಎಲ್ನಿಂದ ನಿಷೇಧಕ್ಕೊಳಗಾದಾಗ ಧೋನಿ ಪುಣೆ ತಂಡ ಸೇರಿ 14 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಒಟ್ಟಾರೆ ಈವರೆಗೆ ಅವರು ಐಪಿಎಲ್ನಲ್ಲಿ 213 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ರೋಹಿತ್ ಶರ್ಮಾ(146 ಪಂದ್ಯ), ವಿರಾಟ್ ಕೊಹ್ಲಿ(140) ಪಂದ್ಯ ನಂತರದ ಸ್ಥಾನಗಳಲ್ಲಿದ್ದಾರೆ.
