ಬೆಂಗಳೂರು(ಆ.16):  2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಹೀಗೆ ಐಸಿಸಿ ಆಯೋಜನೆಯ ಮೂರು ಜಾಗತಿಕ ಟ್ರೋಫಿಗಳನ್ನು ಗೆದ್ದು ಕೊಟ್ಟ ಏಕೈಕ ನಾಯಕ. ಜತೆಗೆ 2 ಬಾರಿ ಏಷ್ಯಾಕಪ್, ಭಾರತ ತಂಡವನ್ನು ಟೆಸ್ಟ್‌ನಲ್ಲಿ ನಂ.1 ಪಟ್ಟಕ್ಕೇರಿಸುವ ಜತೆಗೆ ಮೇಸ್ (ನಂ.1 ಟೆಸ್ಟ್ ತಂಡಕ್ಕೆ ನೀಡುವ ಪ್ರಶಸ್ತಿ) ಅನ್ನು ಭಾರತ ತಂಡದ ಮುಡಿಗೇರಿಸಿದ ಅಪ್ರತಿಮ ಕ್ರಿಕೆಟಿಗ. ಮೂರು ಮಾದರಿಯಲ್ಲೂ ಭಾರತ ಕ್ರಿಕೆಟ್ ತಂಡವನ್ನು ಐಸಿಸಿ  ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಸಾಧಕ.

ಹೀಗೆ ಭಾರತ ತಂಡಕ್ಕೆ ಎಲ್ಲವನ್ನು ಕೊಟ್ಟ ಏಕೈಕ ನಾಯಕ ಎಂ.ಎಸ್.ಧೋನಿ. ಸದಾ ಕ್ರೀಡಾಂಗಣದಲ್ಲಿ ಶಾಂತರಾಗಿಯೇ ಕಾಣುವ ಧೋನಿ, ನಾಯಕರಾಗಿ ಮಾಡಿರುವ ಸಾಧನೆ ಅಭೂತಪೂರ್ವ. ಅತಿ ಹೆಚ್ಚು ಗೆಲುವು ಕಂಡ ಟೀಂ ಇಂಡಿಯಾದ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಇದೇ ಧೋನಿ ಎಂಬ ಮಾಂತ್ರಿಕ. ಧೋನಿ ನಾಯಕತ್ವದಲ್ಲಿ ಭಾರತ 110 ಏಕದಿನ, 27 ಟೆಸ್ಟ್ ಹಾಗೂ 41 ಟಿ20ಯಲ್ಲಿ ಜಯ ಸಾಧಿಸಿದೆ. ಇದರೊಟ್ಟಿಗೆ ಚೆನ್ನೈ ತಂಡಕ್ಕೆ 3 ಬಾರಿ ಐಪಿಎಲ್ ಹಾಗೂ 2 ಬಾರಿ ಚಾಂಪಿಯನ್ಸ್ ಲೀಗ್ ಗೆದ್ದು ಕೊಟ್ಟ ಅದ್ವೀತಿಯ ಕ್ಯಾಪ್ಟನ್. ಹೀಗೆ ಟೀಂ ಇಂಡಿಯಾದ ನಾಯಕನಾಗಿ ಧೋನಿ ಸಾಧನೆ ಅವರ್ಣನೀಯ, ಅದ್ವಿತೀಯ, ಅಮೋಘ. ಇಂತಿಪ್ಪ ಧೋನಿ ಇದೀಗ ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಹೇಳಿದ್ದು, ನಾಯಕರಾಗಿ ಧೋನಿ ಸಾಧಿಸಿದ ದಾಖಲೆಗಳ ಝಲಕ್ ಇಲ್ಲಿದೆ.

2007 ಚೊಚ್ಚಲ ಟಿ20 ವಿಶ್ವಕಪ್ ‘ಚಾಂಪಿಯನ್’: ಧೋನಿಯಲ್ಲಿನ ತಾಳ್ಮೆ ಹಾಗೂ ನಾಯಕತ್ವದ ಗುಣಗಳನ್ನು ಗುರುತಿಸಿದ ರಾಹುಲ್ ದ್ರಾವಿಡ್ ಅವರ ಸಲಹೆಯಂತೆ 2007ರಲ್ಲಿ ಧೋನಿಗೆ ಮೊದಲ ಬಾರಿ ಟೀಂ ಇಂಡಿಯಾದ ನಾಯಕ ಸ್ಥಾನ ನೀಡಲಾಯಿತು. ಧೋನಿ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹಾರಿದ ಭಾರತ ತಂಡ, ಐಸಿಸಿ ಮೊದಲ ಬಾರಿಗೆ ಆಯೋಜಿಸಿದ್ದ ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಹೀಗೆ ತಮಗೆ ದೊರೆತ ಮೊದಲ ಅವಕಾಶದಲ್ಲೇ ತಾವೆಂತ ಸಾಧಕ ಎಂಬುದನ್ನು ಧೋನಿ ತೋರಿಸಿಕೊಟ್ಟರು. ಈ ಪಂದ್ಯಾವಳಿ ವೇಳೆ ಧೋನಿ ತೆಗೆದುಕೊಂಡ ಅಚ್ಚರಿಯ ನಿರ್ಣಯಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿಸಿತು. ಅದರಲ್ಲೂ ಫೈನಲ್ ನಲ್ಲಿ ಇನ್ನೇನು ಎಲ್ಲ ಮುಗಿದೇ ಹೋಯಿತು ಎನ್ನುವ ವೇಳೆ, ಜೋಗಿಂದರ್ ಶರ್ಮಾಗೆ ಬೌಲಿಂಗ್ ನೀಡುವ ಮೂಲಕ ಮಿಸ್ಬಾ ಉಲ್ ಹಕ್ ವಿಕೆಟ್ ಉರುಳಿಸಿದ ಕ್ಷಣ ಅವಿಸ್ಮರಣೀಯ. ಹೀಗೆ ಧೋನಿ ನಾಯಕತ್ವದಲ್ಲಿ ಸಾಕಷ್ಟು ನೆನಪಿನ ಬುತ್ತಿಗಳಿವೆ.

2011 ಏಕದಿನ ವಿಶ್ವಕಪ್ ಮಹತ್ಸಾಧನೆ: ಟಿ20 ವಿಶ್ವಕಪ್ ಗೆದ್ದ ನಂತರ ಧೋನಿ ಮೇಲಿನ ಜವಾಬ್ದಾರಿ ಹೆಚ್ಚಾಯಿತು. ಜತೆಗೆ ಏಕದಿನ ಮಾದರಿಯ ನಾಯಕತ್ವವೂ ರಾಂಚಿಯ ಹುಡುಗನ ಹೆಗಲಿಗೇರಿತು. ಈ ವೇಳೆ ಸಾಕಷ್ಟು ಟೀಕೆಗಳಿಗೆ ಗುರಿಯಾದರೂ 2011ರ ವಿಶ್ವಕಪ್ ಅನ್ನು ಗಮನಿದಲ್ಲಿರಿಸಿದ ಧೋನಿ, ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದರು. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ಸಮತೋಲಿತ ತಂಡವನ್ನು ಕಟ್ಟಿದರು. ಇದರ ಫಲವೇ 28 ವರ್ಷಗಳ ಬಳಿಕ ವಿಶ್ವಕಪ್ ಕಿರೀಟ ಭಾರತದ ಮುಡಿಗೇರಿತು. ಅದರಲ್ಲೂ ಫೈನಲ್‌ನಲ್ಲಿ ತಂಡ ಸಂಕಷ್ಟದಲ್ಲಿ ಸಿಲುಕಿದ ಸಂದರ್ಭದಲ್ಲಿ ಸ್ವತಃ ಬ್ಯಾಟಿಂಗ್‌ಗೆ ಇಳಿದ ನಡೆಸಿದ ರೀತಿ ಇಂದಿಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಕಂಟ್ಟಿದಂತಿದೆ. ಈ ರೀತಿಯಲ್ಲಿ ಯಾವಾಗಲೂ ಎದುರಾಳಿಗಳು ಊಹಿಸದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ ಧೋನಿ ಅದರಲ್ಲಿ ಯಶ ಕಾಣುತ್ತಿದ್ದರು. ಈ ಮೂಲಕ ವೃತ್ತಿಜೀವನದಲ್ಲಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಲೇಬೇಕೆಂಬ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕನಸನ್ನು ನನಸು ಮಾಡಿಸಿದ್ದು, ಇದೇ ಧೋನಿಯೇ.

2013ರಲ್ಲಿ ಚಾಂಪಿಯನ್ಸ್ ಟ್ರೋಫಿ ವಿಜೇತ: 2011ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ, 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಈ ನಿರೀಕ್ಷೆಗಳನ್ನು ಹುಸಿಗೊಳಿಸದ ಧೋನಿ, ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐಸಿಸಿಯ ಮೂರು ಮಹತ್ವದ ಟ್ರೋಫಿ ಗಳನ್ನು ಜಯಿಸಿದ ಏಕೈಕ ನಾಯಕ ಎಂಬ ದಾಖಲೆ ಬರೆದರು. ಭಾರತ ಚಾಂಪಿಯನ್ ಆಗುವಲ್ಲಿ ಇಲ್ಲೂ ಮಹತ್ವದ ಪಾತ್ರ ವಹಿಸಿದ್ದು ಧೋನಿ ತೆಗೆದುಕೊಂಡ ನಿರ್ಣಯಗಳೇ.

ಜಾಗತಿಕ ಕ್ರಿಕೆಟ್‌ನ ಕೂಲ್ ಕ್ಯಾಪ್ಟನ್ ಮಹೇಂದ್ರ..!

‘ಟೆಸ್ಟ್ ಗದೆ’ ಹಿಡಿದ ಮೊದಲ ನಾಯಕ: 2008ರಲ್ಲಿ ಅನಿಲ್ ಕುಂಬ್ಳೆ ಗಾಯಗೊಂಡ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾನ್ಪುರದಲ್ಲಿ ನಡೆದ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದರು. ಈ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು, ಜತೆಗೆ ಸರಣಿಯಲ್ಲೂ ಸಮಬಲ ಸಾಧಿಸಿತು. ಹೀಗೆ ಕುಂಬ್ಳೆ ಅನುಪಸ್ಥಿತಿಯಲ್ಲಿ ಟೆಸ್ಟ್ ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ಧೋನಿ, ಕುಂಬ್ಳೆ ನಿವೃತ್ತಿ ಬಳಿಕ ಟೆಸ್ಟ್ ತಂಡದ ಪೂರ್ಣ ಪ್ರಮಾಣದ ನಾಯಕರಾದರು. 2008-09ರಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದ ಭಾರತ, 2009-10ರಲ್ಲಿ ಶ್ರೀಲಂಕಾ ವಿರುದ್ಧ 2-0ರಲ್ಲಿ ಸರಣಿ ಜಯ ಸಾಧಿಸುವ ಮೂಲಕ ಟೆಸ್ಟ್‌ನಲ್ಲಿ ಅಗ್ರಸ್ಥಾನಕ್ಕೇರಿತು. ಅಲ್ಲದೇ 11 ತಿಂಗಳು ಸತತ ನಂ.1 ಸ್ಥಾನದಲ್ಲಿದ್ದ ಭಾರತ ಮೊದಲ ಬಾರಿಗೆ ಮೆಸ್ ಪ್ರಶಸ್ತಿಯನ್ನು ಪಡೆಯಿತು. ಹೀಗೆ ಮೆಸ್ ಪಡೆದ ಭಾರತ ತಂಡದ ಚೊಚ್ಚಲ ನಾಯಕ ಎಂಬ ದಾಖಲೆ ಇರುವುದು ಎಂಎಸ್‌ಡಿ ಹೆಸರಿನಲ್ಲಿಯೇ. ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ಧೋನಿ ಭಾರತವನ್ನು ಮುನ್ನಡೆಸಿದ್ದು 27ರಲ್ಲಿ ಗೆಲುವು ಸಾಧಿಸಿದ್ದರೆ, 15 ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ. ಇದು ಮಾತ್ರವಲ್ಲದೇ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ಹಾಗೂ ಟಿ20 ಮಾದರಿಯಲ್ಲೂ ಅಗ್ರಸ್ಥಾನಕ್ಕೇರಿತ್ತು.

3 ಬಾರಿ ಐಪಿಎಲ್, 2 ಬಾರಿ ಚಾಂಪಿಯನ್ಸ್ ಲೀಗ್ ಗೆಲುವು: 2008ರಲ್ಲಿ ಆರಂಭಗೊಂಡ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನಲ್ಲೂ ಕ್ಯಾಪ್ಟನ್ ಕೂಲ್ ಪಾರಮ್ಯ ಮೆರೆದಿದ್ದಾರೆ. ಐಪಿಎಲ್ ಪ್ರಾರಂಭದಿಂದಲೂ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿರುವ ಧೋನಿ ನೇತೃತ್ವದಲ್ಲಿ ತಂಡ 2010, 2011 ಹಾಗೂ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ 2 ವರ್ಷಗಳ ನಿಷೇಧದ ಬಳಿಕ 2018ರಲ್ಲಿ ಚೆನ್ನೈ, ಐಪಿಎಲ್‌ಗೆ ಮರಳಿತ್ತು. ಈ ವೇಳೆ ತಮ್ಮ ಚಾಣಕ್ಯತನ ಮೆರೆದ ಧೋನಿ, ಚೆನ್ನೈ ಅನ್ನು ಮತ್ತೆ ಚಾಂಪಿಯನ್ ಆಗಿ ಮಾಡಿದ್ದರು. ವಿಶೇಷವೆಂದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಹಿರಿಯ ಆಟಗಾರರಿರುವ ತಂಡ ಚೆನ್ನೈ. 2019ರಲ್ಲೂ ಅಂತಿಮ ಘಟಕ್ಕೇರಿದ್ದ ಸಿಎಸ್‌ಕೆ, ಫೈನಲ್ ನಲ್ಲಿ ಮುಂಬೈಗೆ ತಲೆಬಾಗಿತ್ತು. ಇದರೊಂದಿಗೆ 4ನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತಗೊಂಡಿತು. ಜತೆಗೆ 2010 ಮತ್ತು 2011ರಲ್ಲಿ ಚೆನ್ನೈ ತಂಡ ಚಾಂಪಿಯನ್ ಲೀಗ್‌ನಲ್ಲೂ ಸತತ 2 ಬಾರಿ ಚಾಂಪಿಯನ್ ಆಗಿತ್ತು.