ಅಡಿಲೇಡ್(ಡಿ.20)‌: ಭಾರತದ ವೇಗಿ ಮೊಹಮದ್‌ ಶಮಿ ಮಣಿಕಟ್ಟು ಮುರಿದಿದ್ದು, ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಶನಿವಾರ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವ ವೇಳೆ ಪ್ಯಾಟ್‌ ಕಮಿನ್ಸ್‌ನ ಎಸೆತ ಶಮಿಯ ಕೈಗೆ ಬಡಿಯಿತು. ಭಾರೀ ನೋವಿನಿಂದ ಬಳಲಿದ ಶಮಿ, ಮೈದಾನ ತೊರೆದರು. ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿಸಲಾಯಿತು. ಸ್ಕ್ಯಾನಿಂಗ್‌ ವರದಿಯಲ್ಲಿ ಮಣಿಕಟ್ಟು ಮುರಿದಿರುವುದು ದೃಢಪಟ್ಟಿದ್ದು, ಅವರು ಮುಂದಿನ 3 ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅಸಾಧ್ಯ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಮಿ ಆಡದಿದ್ದರೆ ಅವರ ಬದಲು ಮೊಹಮದ್‌ ಸಿರಾಜ್‌ ಕಣಕ್ಕಿಳಿಯುವ ನಿರೀಕ್ಷೆ ಇದೆ.

2009ರಿಂದ ಸತತ 11 ವರ್ಷ ಮಾಡಿದ್ದ ಸಾಧನೆ 2020ರಲ್ಲಿ ಕೊಹ್ಲಿಗೇ ಆಗಲೇ ಇಲ್ಲ!

ಸಿರಾಜ್‌ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಇಲ್ಲವೇ ಯುವ ವೇಗಿ ಕಾರ್ತಿಕ್‌ ತ್ಯಾಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎನ್ನುವ ಸುದ್ದಿ ಸಹ ಹರಿದಾಡುತ್ತಿದೆ. ಏಕದಿನ, ಟಿ20 ಮಾದರಿಯಲ್ಲಿ ಗಮನ ಸೆಳೆದಿದ್ದ ಎಡಗೈ ವೇಗಿ ತಂಗರಸು ನಟರಾಜನ್‌ ಸಹ ಟೆಸ್ಟ್‌ ತಂಡಕ್ಕೆ ಸೇರ್ಪಡೆಗೊಳ್ಳಬಹುದು ಎನ್ನಲಾಗಿದೆ.