SA vs India Boxing Day Test : ಭಾರತದ ದಾಳಿಗೆ ದಕ್ಷಿಣ ಆಫ್ರಿಕಾ ಕಂಗಾಲು, ದಿನದಲ್ಲಿ ಉರುಳಿತು 18 ವಿಕೆಟ್ !
ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ 130 ರನ್ ಮುನ್ನಡೆ
ಮೊಹಮದ್ ಶಮಿ ದಾಳಿಗೆ 197 ರನ್ ಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ
ಮೂರನೇ ದಿನದಾಟದಲ್ಲಿ ಒಟ್ಟು 18 ವಿಕೆಟ್ ಪತನ
ಸೆಂಚುರಿಯನ್ (ಡಿ.28): ಮೊಹಮದ್ ಶಮಿ (Mohammed Shami ) ನೇತೃತ್ವದಲ್ಲಿ ಭಾರತದ (Team India) ಬೌಲಿಂಗ್ ವಿಭಾಗ ತೋರಿದ ಭರ್ಜರಿ ಬೌಲಿಂಗ್ ನಿರ್ವಹಣೆಯಿಂದ ಟೀಮ್ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತದ ಮುನ್ನಡೆ ಕಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 327 ರನ್ ಗೆ ಆಲೌಟ್ ಆಗಿದ್ದ ಭಾರತ ತಂಡ ಬಳಿಕ ದಕ್ಷಿಣ ಆಫ್ರಿಕಾ ತಂಡವನ್ನು 197 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 130 ರನ್ ಗಳ ಅಮೂಲ್ಯ ಮುನ್ನಡೆಯನ್ನು ಕಂಡುಕೊಂಡಿತು. 2ನೇ ಇನ್ನಿಂಗ್ಸ್ ಆರಂಭಿಸಿರುವ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 16 ರನ್ ಬಾರಿಸಿದ್ದು, ಒಟ್ಟಾರೆ 146 ರನ್ ಗಳ ಮುನ್ನಡೆಯಲ್ಲಿದೆ.
ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್ ಗೆ 272 ರನ್ ಗಳಿಂದ 3ನೇ ದಿನವಾದ ಮಂಗಳವಾರ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ದಕ್ಷಿಣ ಆಫ್ರಿಕಾ ವೇಗಿಗಳು ಕಡಿವಾಣ ಹೇರಿದರು. 55 ರನ್ ಗೆ ಕೊನೆಯ 7 ವಿಕೆಟ್ ಗಳನ್ನು ಕಲೆದುಕೊಂಡ ಭಾರತ 327 ರನ್ ಗೆ ಅಲೌಟ್ ಆಯಿತು. ಮೊದಲ ದಿನದಾಟದಲ್ಲಿ ಭಾರತ ಕೇವಲ 3 ವಿಕೆಟ್ ಕಳೆದುಕೊಂಡಿದ್ದರೆ, 2ನೇ ದಿನದಾಟ ಮಳೆಯಿಂದಾಗಿ ಸಂಪುರ್ಣ ರದ್ದಾಗಿತ್ತು. 3ನನೆ ದಿನದಾಟದಲ್ಲಿ ಒಟ್ಟಾರೆ 18 ವಿಕೆಟ್ ಉರುಳಿದರೂ ಭಾರತ ಅಮೂಲ್ಯ ಮುನ್ನಡೆ ಕಂಡಿರುವ ಕಾರಣ ನಿರಾಳವಾಗಿದೆ. ಪಂದ್ಯದ ಐದನೇ ದಿನಕ್ಕೂ ಮಳೆಯ ಅಡಚಣೆ ಮುನ್ಸೂಚನೆ ಇದ್ದರೂ, ನಾಲ್ಕನೇ ದಿನದಲ್ಲೇ ಬಹುತೇಕವಾಗಿ ಪಂದ್ಯ ಮುಕ್ತಾಯಗೊಳ್ಳುವ ಸಾಧ್ಯತೆ ಕಾಣುತ್ತಿದೆ.
ದಿನದ ಆರಂಭಿಕ 69 ಎಸೆತಗಳಲ್ಲೇ ಭಾರತದ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದರಿಂದ ಭೋಜನ ವಿರಾಮಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಗೆ ಇಳಿಯಿತು. ನಾಯಕ ಡೀನ್ ಎಲ್ಗರ್ (Dean Elgar) ವಿಕೆಟ್ ಅನ್ನು ಬುಮ್ರಾ ಮೊದಲ ಓವರ್ ನಲ್ಲೇ ಉರುಳಿಸಿದರೆ, ಭೋಜನ ವಿರಾಮದ ಬಳಿಕ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವಿಭಾಗ ದಯನೀಯ ವೈಫಲ್ಯ ಕಂಡಿತು. ಮೊಣಕಾಲು ಗಾಯದಿಂದಾಗಿ ಕೇವಲ 7.2 ಓವರ್ ಬೌಲಿಂಗ್ ಮಾಡಿದ ಜಸ್ ಪ್ರೀತ್ ಬುಮ್ರಾ (Bumrah) ಅನುಪಸ್ಥಿತಿ ಕಾಡದೇ ಇರುವಂತೆ ಬೌಲಿಂಗ್ ಮಾಡಿದ ಮೊಹಮದ್ ಶಮಿ ಹಾಗೂ ಮೊಹಮದ್ ಸಿರಾಜ್ (Siraj) ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೀಗನ್ ಪೀಟರ್ ಸೆನ್ ಹಾಗೂ ಏಡೆನ್ ಮಾರ್ಕ್ರಮ್ ರನ್ನು ಮೊಹಮದ್ ಶಮಿ ಬೌಲ್ಡ್ ಮಾಡಿದರೆ, ರಸ್ಸಿ ವಾನ್ ಡರ್ ಡುಸೆನ್ ವಿಕೆಟ್ ಅನ್ನು ಮೊಹಮದ್ ಸಿರಾಜ್ ಉರುಳಿಸಿದ್ದರಿಂದ ದಕ್ಷಿಣ ಆಫ್ಇರಕಾ 32 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು.
ಆ ಬಳಿಕ ಟೆಂಬಾ ಬವುಮಾ (51) ಹಾಗೂ ಕ್ವಿಂಟರ್ ಡಿ ಕಾಕ್ ಕೆಲ ಹೊತ್ತು ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಗೆ ಚೇತರಿಕೆ ನೀಡಿದರು. 63 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೊಂದಿಗೆ 34 ರನ್ ಬಾರಿಸಿದ್ದ ಡಿ ಕಾಕ್, ಚಹಾ ವಿರಾಮಕ್ಕೂ ಸ್ವಲ್ಪ ಹೊತ್ತಿಗೆ ಮುನ್ನ ವಿಕೆಟ್ ನೀಡಿದರು. ಇನ್ನೊಂದೆಡೆ ಬವುಮಾ (Temba Bavuma) ಅರ್ಧಶತಕದ ಗಡಿ ದಾಟಿದ ಬೆನ್ನಲ್ಲಿಯೇ ವಿಕೆಟ್ ನೀಡಿ ನಿರ್ಗಮಿಸಿದರು. ಆದರೆ, ದಕ್ಷಿಣ ಆಫ್ರಿಕಾದ ಕೆಳ ಕ್ರಮಾಂಕ ಕೆಲ ಹೊತ್ತು ಪ್ರತಿರೋಧ ನೀಡಿದ್ದರಿಂದ ಕೆಲ ರನ್ ಗಳು ದಾಖಲಾದವು. ಮಾರ್ಕೋ ಜಾನ್ಸೆನ್, ಕಗೀಸೋ ರಬಾಡ 10ಕ್ಕೂ ಅಧಿಕ ಓವರ್ ಎದುರಿಸಿ 37 ರನ್ ಕೂಡಿಸಿದರು. ಶಾರ್ದೂಲ್ ಠಾಕೂರ್ ಎಸೆತದಲ್ಲಿ ಜಾನ್ಸೆನ್ ಔಟ್ ಆದರೆ, ರಬಾಡ ವಿಕೆಟ್ ಉರುಳಿಸುವ ಮೂಲಕ ಮೊಹಮದ್ ಶಮಿ ಟೆಸ್ಟ್ ನಲ್ಲಿ ತಮ್ಮ 200ನೇ ವಿಕೆಟ್ ಸಾಧನೆ ಮಾಡಿದರು. ಕೇಶವ್ ಮಹಾರಾಜ್ ಔಟಾಗುವ ಮುನ್ನ ಮೂರು ಬೌಂಡರಿ ಬಾರಿಸಿದರಾದರೂ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ವಿಫಲರಾದವು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಗೆ ಕಡಿವಾಣ ಹಾಕಿದ ಶಮಿ 44 ರನ್ ಗೆ 5 ವಿಕೆಟ್ ಉರುಳಿಸಿದರು.
SA vs India Boxing Day Test: 55 ರನ್ ಅಂತರದಲ್ಲಿ ಉರುಳಿದ 7 ವಿಕೆಟ್, 327ಕ್ಕೆ ಭಾರತ ಆಲೌಟ್!
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ಕೊನೆಯ 55 ರನ್ ಗೆ 7 ವಿಕೆಟ್ ಕಳೆದುಕೊಂಡಿರು. ಶತಕವೀರ ಕೆಎಲ್ ರಾಹುಲ್ (123) ಮೊದಲ ದಿನದ ಮೊತ್ತಕ್ಕ 1 ರನ್ ಪೇರಿಸಿದರೆ, ಅಜಿಂಕ್ಯ ರಹಾನೆ (48) 8 ರನ್ ಸೇರಿಸಿ ಔಟಾದರು. ಉಳಿದಂತೆ ರಿಷಭ್ ಪಂತ್, ಆರ್ ಅಶ್ವಿನ್ ಹಾಗೂ ಶಾರ್ದೂಲ್ ಠಾಕೂರ್ ಒಂದಂಕಿ ಮೊತ್ತಕ್ಕೆ ನಿರ್ಗಮನ ಕಂಡರು. ದಕ್ಷಿಣ ಆಫ್ರಿಕಾ ಪರವಾಗಿ ಲುಂಜಿ ಎನ್ ಗಿಡಿ 6 ವಿಕೆಟ್ ಉರುಳಿಸಿದರೆ, ಕಗಿಸೋ ರಬಾಡ 3 ವಿಕಟ್ ಉರುಳಿಸಿ ಭಾರತದ ಇನ್ನಿಂಗ್ಸ್ ಗೆ ಕಡಿವಾಣ ಹಾಕಿದರು.
ಭಾರತ: 327 (ಕೆಎಲ್ ರಾಹುಲ್ 123, ಮಯಾಂಕ್ ಅಗರ್ವಾಲ್ 60, ಎನ್ ಗಿಡಿ 71ಕ್ಕೆ 6, ಕಗಿಸೋ ರಬಾಡ 72ಕ್ಕೆ 3) ಮತ್ತು 1 ವಿಕೆಟ್ ಗೆ 16. ದಕ್ಷಿಣ ಆಫ್ರಿಕಾ: 197 (ಟೆಂಬಾ ಬವುಮಾ 52, ಮೊಹಮದ್ ಶಮ 44ಕ್ಕೆ 5)