ಮ್ಯಾಂಚೆಸ್ಟರ್(ಸೆ.02): ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ ಹಾಗೂ 19 ವರ್ಷದ ಯುವ ಪ್ರತಿಭೆ ಹೈದರ್ ಅಲಿ ತಮ್ಮ ಪಾದಾರ್ಪಣ ಪಂದ್ಯದಲ್ಲೇ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಹೌದು, ಪಾಕಿಸ್ತಾನ ನೀಡಿದ್ದ 191 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೋವ್ ಶೂನ್ಯ ಸುತ್ತಿ ಶಾಹೀನ್ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ಮಲಾನ್(7) ಹಾಗೂ ನಾಯಕ ಇಯಾನ್ ಮಾರ್ಗನ್(10) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಟಾಮ್‌ ಬಾಂಟನ್ ಕೇವಲ 31 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 46 ರನ್ ಸಿಡಿಸಿದರು.  

ಮೊಯಿನ್ ಅಲಿ ಹೋರಾಟ್ ವ್ಯರ್ಥ: 69 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಆಲ್ರೌಂಡರ್ ಮೊಯಿನ್ ಅಲಿ ಆಸರೆಯಾದರು. ಕೇವಲ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 61 ರನ್ ಸಿಡಿಸಿ ವಹಾಬ್‌ ರಿಯಾಜ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 20 ರನ್‌ಗಳ ಅಗತ್ಯವಿತ್ತು. 19 ಓವರ್ ದಾಳಿ ನಡೆಸಿದ ವಹಾಬ್ ರಿಯಾಜ್ ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಪಾಕ್‌ನತ್ತ ವಾಲುವಂತೆ ಮಾಡಿದರು. ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್ ಕೇವಲ 11 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಕೊಹ್ಲಿ, ಫಿಂಚ್‌ ದಾಖಲೆ ಸರಿಗಟ್ಟಿದ ಬಾಬರ್‌

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಫಖರ್ ಜಮಾನ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಬಾಬರ್ ಅಜಂ ಬ್ಯಾಟಿಂಗ್ 21 ರನ್‌ಗಳಿಗೆ ಸೀಮಿತವಾಯಿತು.

ಪಾಕ್‌ಗೆ ಅಸರೆಯಾದರ ಹೈದರ್ ಅಲಿ-ಮೊಹಮ್ಮದ್ ಹಫೀಜ್: ಒಂದು ಹಂತದಲ್ಲಿ 32 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಯುವ ಆಟಗಾರ ಹೈದರ್ ಅಲಿ ಹಾಗೂ ಮೊಹಮ್ಮದ್ ಹಫೀಜ್ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ ಶತಕದ ಜತೆಯಾಟವಾಡಿತು. ಪಾದಾರ್ಪಣ ಪಂದ್ಯದಲ್ಲೇ ದಿಟ್ಟ ಬ್ಯಾಟಿಂಗ್ ನಡೆಸಿದ ಅಲಿ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 54 ಸಿಡಿಸಿದರು. ಮತ್ತೊಂದು ತುದಿಯಲ್ಲಿ ಅನುಭವಿ ಬ್ಯಾಟ್ಸ್‌ಮನ್ ಹಫೀಜ್ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 86 ರನ್ ಬಾರಿಸುವ ಮೂಲಕ ತಂಡ 190 ರನ್ ಗಳಿಸಲು ನೆರವಾದರು.

3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯವನ್ನು ಇಂಗ್ಲೆಂಡ್ ಜಯಿಸಿದ್ದರೆ, ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಗೆದ್ದ ಪಾಕಿಸ್ತಾನ ಸರಣಿ ಸಮಬಲ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್:

ಪಾಕಿಸ್ತಾನ: 190/4
ಹಫೀಜ್: 86

ಇಂಗ್ಲೆಂಡ್: 185/8
ಮೊಯಿನ್ ಅಲಿ: 61