4 ರಾಜ್ಯಗಳ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಜಯಭೇರಿ ಬಾರಿಸಿದರೂ, ವಾರಣಾಸಿ ಮತ್ತು ನಾಗ್ಪುರದಂತಹ ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿದ್ದರೆ, ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷ ಖಾತೆ ತೆರೆದಿದೆ. ಈ ಫಲಿತಾಂಶಗಳು ಮುಂಬರುವ ಚುನಾವಣೆಗಳಿಗೆ ಹೊಸ ಸಂದೇಶ ರವಾನಿಸಿವೆ.
ರಾಜ್ಯ ರಾಜಕಾರಣದಿಂದ ಹಿಡಿದು ರಾಷ್ಟ್ರ ರಾಜಕಾರಣದವರೆಗೂ ಎಂಎಲ್ಸಿ (MLC) ಚುನಾವಣೆ ಮೂಡಿಸಿದ ಸಂಚಲನ ಅಷ್ಟಿಷ್ಟಲ್ಲ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ನಡೆದ ಈ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಎಲ್ಲೆಡೆ ಜಯಭೇರಿ ಬಾರಿಸಿದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿವೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟವು ಆಡಳಿತಾರೂಢ ಕಾಂಗ್ರೆಸ್ಗೆ ತಮ್ಮ ದೋಸ್ತಿ ಪ್ರಾಬಲ್ಯದ ಬಿಸಿ ಮುಟ್ಟಿಸಿದೆ. ಹಾಗಾದರೆ, ಈ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಜಯ ಸಾಧಿಸಿದ್ದರೂ, ಎಸ್ಪಿ ಮತ್ತು ಕಾಂಗ್ರೆಸ್ ನೀಡಿದ ಟಕ್ಕರ್ ಏನು? ಇಲ್ಲಿದೆ ಸಂಪೂರ್ಣ ವಿವರ.
4 ರಾಜ್ಯಗಳಲ್ಲೂ ಕೇಸರಿಮಯ! ಆದರೂ ಬಿಜೆಪಿಗೆ ಕಾಡುತ್ತಿರುವ ಆತಂಕವೇನು?
ಹೌದು, ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಮಹತ್ವದ ಅಂಶವೆಂದರೆ ಅದು ಬಿಜೆಪಿಯ ಸೋಲು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿ ಹಾಗೂ ಅಲಿಗಢದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಮಾಜವಾದಿ ಪಾರ್ಟಿ ಭರ್ಜರಿ ಜಯ ಸಾಧಿಸಿದೆ. ಈ ಫಲಿತಾಂಶವು ಪ್ರಾದೇಶಿಕವಾಗಿ ಸಮಾಜವಾದಿ ಪಾರ್ಟಿ ಯಾವ ರೀತಿ ಬಲಿಷ್ಠವಾಗಿ ಹೊರಹೊಮ್ಮುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಮುನ್ಸೂಚನೆ ನೀಡಿದಂತಿದೆ. ಉತ್ತರ ಪ್ರದೇಶದ 11 ಕ್ಷೇತ್ರಗಳ ಪೈಕಿ ಬಿಜೆಪಿ 6 ಕ್ಷೇತ್ರಗಳಲ್ಲಿ ಗೆದ್ದಿದ್ದರೂ, ವಾರಣಾಸಿಯಲ್ಲೇ ಮುಖಭಂಗ ಅನುಭವಿಸಿರುವುದು ಪಕ್ಷಕ್ಕೆ ಕೊಂಚ ಮುಜುಗರ ಉಂಟುಮಾಡಿದೆ. ಮತ್ತೊಂದೆಡೆ, ನಾಲ್ಕೂ ರಾಜ್ಯಗಳಲ್ಲಿ ಧೂಳೀಪಟವಾಗಿರುವ ಕಾಂಗ್ರೆಸ್ ಮಾತ್ರ ಬ್ಯಾಲೆಟ್ ಪೇಪರ್ ಜಪ ಮಾಡುತ್ತಾ ಕಾಲ ಕಳೆಯುವಂತಾಗಿದೆ.
ಬಿಹಾರಿನಲ್ಲಿ ಖಾತೆ ತೆರೆದ ಜನ್ ಸುರಾಜ್ ಪಾರ್ಟಿ!
ಬಿಹಾರದಲ್ಲಿ ಈ ಬಾರಿ ಅತ್ಯಂತ ವಿಚಿತ್ರ ಮತ್ತು ರೋಚಕ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು ಎಂಟು ಸ್ಥಾನಗಳ ಪೈಕಿ ಪ್ರಶಾಂತ್ ಕಿಶೋರ್ ಅವರ 'ಜನ್ ಸುರಾಜ್' ಪಕ್ಷವು ದರ್ಭಾಂಗಾದಲ್ಲಿ ಹಾಲಿ ಕಾಂಗ್ರೆಸ್ ಎಂಎಲ್ಸಿ ಸೋಲಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಖಾತೆ ತೆರೆದಿದೆ. ಉಳಿದಂತೆ ಎನ್ಡಿಎ ಮೈತ್ರಿಕೂಟ 4 ಸ್ಥಾನಗಳನ್ನು ಗೆದ್ದರೆ, ಆರ್ಜೆಡಿ ಒಂದು ಸ್ಥಾನ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿನ ದೊಡ್ಡ ಹೈಲೈಟ್ ಎಂದರೆ, ಪಾಟ್ನಾದಲ್ಲಿ ಕಳೆದ 5 ಅವಧಿಗಳಿಂದ ಗೆಲ್ಲುತ್ತಾ ಬಂದಿದ್ದ ಬಿಜೆಪಿಯ ಹಿರಿಯ ನಾಯಕ ನವಲ್ ಕಿಶೋರ್ ಯಾದವ್ ಅವರು ಆರ್ಜೆಡಿಯ ಡಾ. ಸಂಜೀವ್ ಸಿಂಗ್ ಎದುರು ಭಾರಿ ಹಿನ್ನಡೆ ಅನುಭವಿಸಿ ಸೋಲುಂಡಿದ್ದಾರೆ. ಬಿಹಾರದ ಪ್ರಭಾವಿ ನಾಯಕ ನಿತಿನ್ ನಬೀನ್ ಅವರದೇ ರಾಜಧಾನಿ ಪಾಟ್ನಾದಲ್ಲಿ ಬಿಜೆಪಿಗೆ ಈ ಹಿನ್ನಡೆಯಾಗಿರುವುದು ಪಕ್ಷಕ್ಕೆ ತೀವ್ರ ಮುಜುಗರ ತಂದಿತೆ ಆಗಿದೆ.
ನಾಗ್ಪುರದಲ್ಲಿ 'ಕೈ'ಗೆ ಮರುಜಯ!
ಮಹಾರಾಷ್ಟ್ರದ ರಾಜಕಾರಣದಲ್ಲೂ ಬಿಜೆಪಿಗೆ ಶಾಕ್ ಎದುರಾಗಿದೆ. ಆರ್ಎಸ್ಎಸ್ ಪ್ರಧಾನ ಕಚೇರಿ ಇರುವ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಸಿಎಂ ದೇವೇಂದ್ರ ಫಡ್ನವಿಸ್ ಅವರ ತವರು ನೆಲವಾದ ನಾಗ್ಪುರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಸೋತಿತ್ತು. ಈ ಬಾರಿ ಕಾಂಗ್ರೆಸ್ ಅಲ್ಲಿ ಮರುಜಯ ಸಾಧಿಸುವ ಮೂಲಕ ನಾಗ್ಪುರ ಕೋಟೆ ತನ್ನಲ್ಲೇ ಉಳಿಸಿಕೊಂಡಿದೆ. ಇದರೊಂದಿಗೆ 'ಇಂಡಿಯಾ' ಮೈತ್ರಿಕೂಟವು ಬಿಜೆಪಿಗೆ ಪ್ರಬಲ ಪೈಪೋಟಿಯ ಸಂದೇಶ ನೀಡುತ್ತಲೇ ಬಂದಿದೆ. ಮಹಾರಾಷ್ಟ್ರದ ಒಟ್ಟು 5 ಸ್ಥಾನಗಳ ಪೈಕಿ ಆಡಳಿತಾರೂಢ ಮಹಾಯುತಿ 2 ಸ್ಥಾನ ಗೆದ್ದರೆ, ಮಹಾ ವಿಕಾಸ್ ಅಘಾಡಿ 3 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಹೀಗಾಗಿ ಈ ಜಯ ಬಿಜೆಪಿಗೆ ನಿಜವಾಗಿಯೂ ಖುಷಿ ತಂದಿದೆಯೋ ಅಥವಾ ಮುಂಬರುವ ವಿಧಾನಸಭೆ ಚುನಾವಣೆಗೆ ಆತಂಕ ಮೂಡಿಸಿದೆಯೋ ಎಂಬ ಪ್ರಶ್ನೆ ಹಾಗೇ ಉಳಿದಿದೆ.
ಕರ್ನಾಟಕದಲ್ಲಿ ಹೆಚ್ಚಿದ 'ದೋಸ್ತಿ' ಶಕ್ತಿ!
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಸದ್ಯ ರಾಜ್ಯದಲ್ಲಿ ಗ್ಯಾರಂಟಿ ಅಲೆ ಇರುವ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಆದರೂ ಸಹ, ನಡೆದ 4 ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗದೆ ಸಂಪೂರ್ಣವಾಗಿ ವಿಫಲವಾಗಿದೆ. ಇಲ್ಲಿ ಬಿಜೆಪಿ 3 ಸ್ಥಾನ ಹಾಗೂ ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಮೂಲಕ ಮೈತ್ರಿಕೂಟವು ಕ್ಲೀನ್ ಸ್ವೀಪ್ ಸಾಧಿಸಿದೆ. ಹಾಗಾದರೆ, ಈ ಒಟ್ಟಾರೆ ಫಲಿತಾಂಶದಲ್ಲಿ ಯಾರಿಗೆ ಭಾರಿ 'ಶಾಕ್' ತಟ್ಟಿದೆ ಮತ್ತು ಯಾರಿಗೆ 'ಮೈಸೂರು ಪಾಕ್' ಸಿಕ್ಕಂತಾಗಿದೆ ಎಂಬುದನ್ನು ಈಗ ನೀವೇ ನಿರ್ಧರಿಸಿ.






