ಬೆಂಗಳೂರು(ಮಾ.15): ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ 'ಮಾರ್ಚ್ 15' ಮಹತ್ವದ ಕ್ಷಣಗಳಲ್ಲಿ ಸಾಕ್ಷಿಯಾದ ದಿನವೆನಿಸಿದೆ. ಇದೇ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೂ ಅವಿಸ್ಮರಣೀಯ ದಿನ ಎನಿಸಿದೆ.

ಹೌದು, ಇಂದಿಗೆ 143 ವರ್ಷಗಳ ಹಿಂದೆ ಜಗತ್ತಿನ ಮೊದಲ ಟೆಸ್ಟ್ ಅಧಿಕೃತ ಟೆಸ್ಟ್ ಪಂದ್ಯ ನಡೆದಿತ್ತು. ಇನ್ನು ಭಾರತೀಯರು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕೆಚ್ಚೆದೆಯ ಪ್ರದರ್ಶನ ತೋರುವ ಆಸೀಸ್ ತಂಡದ ಗರ್ವಭಂಗ ಮಾಡಿದ್ದರು.  1877ರಲ್ಲಿ ಮೆಲ್ಬೋರ್ನ್ ಮೈದಾನದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಚೊಚ್ಚಲ ಅಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಿದ್ದವು. ತಾನಾಡಿದ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ತಂಡವು 45 ರನ್‌ಗಳಿಂದ ಜಯಭೇರಿ ಬಾರಿಸಿತ್ತು. 

ಟಿ20 ವಿಶ್ವಕಪ್ ಆಡದೆಯೇ ನಿವೃತ್ತಿಯಾಗ್ತಾರಾ ಧೋನಿ..?

ಮೊದಲ ಟೆಸ್ಟ್ ಪಂದ್ಯದ ಕೆಲ ಅಪರೂಪದ ಸಂಗತಿಗಳು:

* ಇಂಗ್ಲೆಂಡ್ ತಂಡದ ನಾಯಕತ್ವವನ್ನು ಜೇಮ್ಸ್ ಲಿಲ್ಲಿವೈಟ್ ವಹಿಸಿದ್ದರು.   

* ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕಾರ್ಲೆಸ್ ಬನ್ನೇರ್‌ಮನ್ 165 ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆದಿದ್ದರು.

* ಅಲೆನ್ ಹಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ಅವರ ಸಹಪಾಠಿ ಜೇಮ್ಸ್ ಸೌಥರ್ನ್‌ಟನ್ (49 ವರ್ಷ 119 ದಿನಗಳು) ಇದೇ ಪಂದ್ಯದಲ್ಲಿ ಡೆಬ್ಯೂ ಮಾಡಿದ್ದರು. ಈ ದಾಖಲೆ ನೂರು ವರ್ಷಗಳು ಕಳೆದರೂ ಅಚ್ಚಳಿಯದೇ ಉಳಿದಿದೆ.

ಕೋಲ್ಕತಾ ಟೆಸ್ಟ್:

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈಡನ್ ಗಾರ್ಡನ್‌ ಟೆಸ್ಟ್‌ಗೆ ವಿಶಿಷ್ಠ ಸ್ಥಾನವಿದೆ. ಸತತ 16 ಟೆಸ್ಟ್ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಸ್ಟೀವ್ ವಾ ಪಡೆಗೆ ಭಾರತ ತವರಿನಲ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿತ್ತು. ಜತೆಗೆ ಆಸೀಸ್ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿತ್ತು.

ಹೇಗಿತ್ತು ಈಡನ್ ಗಾರ್ಡನ್‌ ಟೆಸ್ಟ್?

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 445 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಆಸೀಸ್ ಮಾರಕ ದಾಳಿಗೆ ತತ್ತರಿಸಿ ಕೇವಲ 171 ರನ್‌ಗಳಿಗೆ ಆಲೌಟ್‌ ಆಯಿತು. ಇದರ ಬೆನ್ನಲ್ಲೇ ಸ್ಟೀವ್ ವಾ ಮತ್ತೊಂದು ಗೆಲುವಿನ ಲೆಕ್ಕಾಚಾರದಲ್ಲಿ ಭಾರತದ ಮೇಲೆ ಫಾಲೋ ಆನ್ ಹೇರಿದರು. ಆದರೆ ಸ್ಟೀವ್ ವಾ ಲೆಕ್ಕಾಚಾರವನ್ನು ಟೀಂ ಇಂಡಿಯಾ ಟೆಸ್ಟ್ ಪರಿಣಿತರಾದ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಸಂಪೂರ್ಣ ತಲೆಕೆಳಗಾಗುವಂತೆ ಮಾಡಿ ಬಿಟ್ಟರು.  ಈ ಜೋಡಿ ಬರೋಬ್ಬರಿ 384 ರನ್‌ಗಳ ಜತೆಯಾಟವಾಡುವ ಮೂಲಕ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ರಾಹುಲ್ ದ್ರಾವಿಡ್ 180 ರನ್ ಬಾರಿಸಿದರೆ, ವಿವಿಎಸ್ ಲಕ್ಷ್ಮಣ್ 281 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 657 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗೆಲ್ಲಲು 257 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ಹರ್ಭಜನ್ ಸಿಂಗ್ ಹ್ಯಾಟ್ರಿಕ್ ಬೌಲಿಂಗ್ ನೆರವಿನಿಂದ ಭಾರತ ರೋಚಕ ಗೆಲುವು ದಾಖಲಿಸಿತು.