ಮ್ಯಾಂಚೆಸ್ಟರ್(ಆ.31)‌: ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಪಡೆದಿದೆ. 

ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 196 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ಸಾಧಿಸಿತು. ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದರ ಜಾನಿ ಬೇರ್‌ಸ್ಟೋವ್(44) ಹಾಗೂ ಟಾಮ್ ಬಾಂಟನ್(20) ದಿಟ್ಟ ಆರಂಭ ಒದಗಿಸಿದರು. ಮೊದಲ 6 ಓವರ್‌ನಲ್ಲಿ 10ರ ಸರಾಸರಿಯಲ್ಲಿ 60ಕ್ಕೂ ಅಧಿಕ ರನ್ ಬಾರಿಸಿತ್ತು. ಆದರೆ 7ನೇ ಓವರ್‌ನಲ್ಲಿ ಶಾದಾಬ್ ಖಾನ್ ಸತತ ಎರಡು ಎಸೆತಗಳಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗೆ ಅಟ್ಟಿದರು. ಇದರೊಂದಿಗೆ ಪಾಕ್‌ ಮೇಲುಗೈ ಸಾಧಿಸಲು ನೆರವಾದರು.

ಆದರೆ ಸಂಕಷ್ಟದ ಸಮಯದಲ್ಲಿ ಜತೆಯಾದ ನಾಯಕ ಇಯಾನ್ ಮಾರ್ನನ್(66) ಹಾಗೂ ಡೇವಿಡ್ ಮಲಾನ್(54*) ಮೂರನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ಪಂದ್ಯ ಇಂಗ್ಲೆಂಡ್ ಪಾಲಾಗುವಂತೆ ಮಾಡಿದರು. ಅದರಲ್ಲೂ ನಾಯಕನ ಆಟವಾಡಿದ ಮಾರ್ಗನ್ ಕೇವಲ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್‌ನೊಂದಿಗೆ 66 ರನ್ ಬಾರಿಸಿದರೆ, ಮತ್ತೊಬ್ಬ ಬ್ಯಾಟ್ಸ್‌ಮನ್ ಮಲಾನ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 54 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಸುರೇಶ್ ರೈನಾ ಕುಟುಂಬಕ್ಕೆ ಶಾಕ್, ದರೋಡೆಕೋರರಿಂದ ಕ್ರಿಕೆಟರ್ ಮಾವನ ಹತ್ಯೆ!

ಇದಕ್ಕೂ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಾಯಕ ಬಾಬರ್ ಅಜಂ(56), ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್(69) ಸ್ಫೋಟಕ ಅರ್ಧಶತಕ ಹಾಗೂ ಫಖರ್ ಜಮಾನ್(36) ಮಿಂಚಿನ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 195 ರನ್‌ ಬಾರಿಸಿತ್ತು.
  
ಸ್ಕೋರ್‌:

ಪಾಕಿಸ್ತಾನ 195/4, ಇಂಗ್ಲೆಂಡ್‌ 199/5