ಶಿವಮೊಗ್ಗ ಸ್ಟ್ರೈಕರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಹುಬ್ಬಳ್ಳಿ ಟೈಗರ್ಸ್‌ಈ ಗೆಲುವಿನೊಂದಿಗೆ ಹುಬ್ಬಳ್ಳಿ ಪ್ಲೇ ಆಫ್‌ ಕನಸು ಜೀವಂತಟೂರ್ನಿಯಲ್ಲಿ 7ನೇ ಸೋಲು ಅನುಭವಿಸಿದ ಶಿವಮೊಗ್ಗ ತಂಡ

ಬೆಂಗಳೂರು(ಆ.20): ನಾಯಕ ಲುವ್ನಿತ್‌ ಸಿಸೋಡಿಯಾ ಮತ್ತು ಬಿ.ಯು.ಶಿವಕುಮಾರ್‌ರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಶಿವಮೊಗ್ಗ ಸ್ಟ್ರೈಕ​ರ್ಸ್‌ ವಿರುದ್ಧ 8 ವಿಕೆಟ್‌ ಗೆಲುವು ಸಾಧಿಸಿದ ಹುಬ್ಬಳ್ಳಿ ಟೈಗ​ರ್ಸ್‌ ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್‌ 5 ವಿಕೆಟ್‌ಗೆ 146 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ಪವರ್‌-ಪ್ಲೇನಲ್ಲಿ ವಿಕೆಟ್‌ ನಷ್ಟವಿಲ್ಲದೆ 49 ರನ್‌ ಗಳಿಸಿತು. ಮೊದಲ ವಿಕೆಟ್‌ಗೆ ಲುವ್ನಿತ್‌(62) ಮತ್ತು ಶಿವಕುಮಾರ್‌ 12.5 ಓವರಲ್ಲಿ 107 ರನ್‌ ಸೇರಿಸಿದರು. ಶಿವಕುಮಾರ್‌ ಔಟಾಗದೆ 61, ಲಿಯಾನ್‌ ಖಾನ್‌ ಔಟಾಗದೆ 19 ರನ್‌ ಗಳಿಸಿ ತಂಡವನ್ನು ಇನ್ನೂ 2.4 ಓವರ್‌ ಬಾಕಿ ಇರುವಂತೆ ದಡ ಸೇರಿಸಿದರು.

ಇದಕ್ಕೂ ಮುನ್ನ ಶರತ್‌ ಬಿ.ಆರ್‌. ಮತ್ತು ಸ್ಟಾಲಿನ್‌ ಹೂವರ್‌ರ ಆಕರ್ಷಕ ಆಟದ ನೆರವಿನಿಂದ ಮೊದಲ ವಿಕೆಟ್‌ಗೆ 78 ರನ್‌ ಜೊತೆಯಾಟ ಪಡೆದ ಶಿವಮೊಗ್ಗ ದಿಢೀರ್‌ ಕುಸಿಯಿತು. ಹುಬ್ಬಳ್ಳಿ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪರಿಣಾಮ ಶಿವಮೊಗ್ಗ ಸ್ಟ್ರೈಕರ್ಸ್‌ ಪಡೆ ಸಾಧಾರಣ ಮೊತ್ತಕ್ಕೆ ಸಮಾಧಾನಪಟ್ಟುಕೊಂಡಿತು.

ಸ್ಕೋರ್‌: 
ಶಿವಮೊಗ್ಗ 20 ಓವರಲ್ಲಿ 146/5(ಸ್ಟಾಲಿನ್‌ 38, ಶರತ್‌ 36, ಕೌಶಿಕ್‌ 2-29)
ಹುಬ್ಬಳ್ಳಿ 17.2 ಓವರಲ್ಲಿ 149/2(ಲುವ್ನಿತ್‌ 62, ಶಿವಕುಮಾರ್‌ 61*, ಶ್ರೇಯಸ್‌ 1-33)

ಆಟಗಾರರ ಮೇಲೆ ಕಣ್ಣಿಟ್ಟ ಐಪಿಎಲ್‌ ತಂಡಗಳು!

ಶುಕ್ರವಾರ ಐಪಿಎಲ್‌ನ ಚೆನ್ನೈ ಸೂಪರ್‌ಕಿಂಗ್ಸ್, ಕೋಲ್ಕತಾ ನೈಟ್‌ರೈಡ​ರ್ಸ್‌ ಮತ್ತು ಲಖನೌ ಸೂಪರ್‌ಜೈಂಟ್ಸ್‌ ತಂಡಗಳ ಸಿಬ್ಬಂದಿ ಮಹಾರಾಜ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಿದರು. ಮುಂದಿನ ಆವೃತ್ತಿಯ ಹರಾಜಿಗೂ ಮುನ್ನ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ, ಸೂಕ್ತ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕೆಲಸಕ್ಕೆ ಚಾಲನೆ ದೊರೆತಿದೆ.

ಏಷ್ಯಾಕಪ್‌ ಟಿ20: ಇಂದಿನಿಂದ ಬೆಂಗ್ಳೂರಲ್ಲಿ ಫಿಟ್ನೆಸ್‌ ಶಿಬಿರ

ಬೆಂಗಳೂರು: ಏಷ್ಯಾಕಪ್‌ ಟಿ20 ಟೂರ್ನಿಗೆ ಸಿದ್ಧತೆ ನಡೆಸುವ ಸಲುವಾಗಿ ಭಾರತ ತಂಡದ ಆಟಗಾರರು ಶನಿವಾರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ನಲ್ಲಿ ಸೇರಲಿದ್ದು, 3 ದಿನಗಳ ಫಿಟ್ನೆಸ್‌ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಹಿತ್‌ ಶರ್ಮಾ ನೇತೃತ್ವದ ತಂಡ ಆಗಸ್ಟ್‌ 23ರಂದು ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸಲಿದೆ ಎಂದು ಮೂಲಗಳು ತಿಳಿಸಿವೆ. 

ಯಾವುದೇ ಪ್ರವಾಸಕ್ಕೂ ಮುನ್ನ ಕಡ್ಡಾಯವಾಗಿ ಫಿಟ್ನೆಸ್‌ ಶಿಬಿರ ನಡೆಸಬೇಕಿದ್ದು, ಆಟಗಾರರು ಹಲವು ಸುತ್ತುಗಳ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿರುವ ಕೆ.ಎಲ್‌.ರಾಹುಲ್‌, ದೀಪಕ್‌ ಹೂಡಾ, ಆವೇಶ್‌ ಖಾನ್‌, ದೀಪಕ್‌ ಚಹರ್‌ ಮತ್ತು ಅಕ್ಷರ್‌ ಪಟೇಲ್‌ ಹರಾರೆಯಿಂದ ನೇರವಾಗಿ ದುಬೈ ತಲುಪಲಿದ್ದಾರೆ. ಆಗಸ್ಟ್‌ 23ರಂದು ಅವರು ತಂಡ ಕೂಡಿಕೊಳ್ಳಲಿದ್ದಾರೆ. 

Maharaja T20 Trophy : ಚೇತನ್‌ ಶತಕ, ಬೆಂಗಳೂರು ವಾರಿಯರ್ಸ್‌ಗೆ 5ನೇ ಗೆಲುವು

ಆಗಸ್ಟ್‌ 27ರಿಂದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದ್ದು, ಆಗಸ್ಟ್‌ 28ರಂದು ಭಾರತ ತಂಡ ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌.ರಾಹುಲ್‌(ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಭುವನೇಶ್ವರ್‌ ಕುಮಾರ್‌, ಅಶ್‌ರ್‍ದೀಪ್‌ ಸಿಂಗ್‌, ಆವೇಶ್‌ ಖಾನ್‌.

ಮೀಸಲು ಆಟಗಾರರು: ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌.