* ಪಾಕಿಸ್ತಾನ ನೆಲದಲ್ಲಿ ಮೂರನೇ ಬಾರಿಗೆ ಟೆಸ್ಟ್ ಸರಣಿ ಗೆದ್ದ ಆಸ್ಟ್ರೇಲಿಯಾ* ಲಾಹೋರ್ ಟೆಸ್ಟ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಪ್ಯಾಟ್ ಕಮಿನ್ಸ್‌ ಬಳಗ* ಮೂರು ಪಂದ್ಯಗಳ ಟೆಸ್ಟ್ ಸರಣಿಯು 1-0 ಅಂತರದಲ್ಲಿ ಆಸೀಸ್ ಪಾಲು

ಲಾಹೋರ್‌(ಮಾ.26): 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಪ್ರೇಲಿಯಾ ತಂಡ (Australia Cricket Team) ಆತಿಥೇಯರ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿದೆ. ಶುಕ್ರವಾರ ಕೊನೆಗೊಂಡ ಅಂತಿಮ ಪಂದ್ಯದಲ್ಲಿ ಆಸೀಸ್‌ 115 ರನ್‌ ಗೆಲುವು ಸಾಧಿಸಿದ್ದಲ್ಲದೇ, ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (Test Rankings) ನಂ.1 ಸ್ಥಾನ ಉಳಿಸಿಕೊಂಡಿತು. ಇದು ಪಾಕ್‌ ನೆಲದಲ್ಲಿ ಆಸೀಸ್‌ ಗೆದ್ದ 3ನೇ ಟೆಸ್ಟ್‌ ಸರಣಿ. ಇದಕ್ಕೂ ಮೊದಲು 1959 ಹಾಗೂ 1998ರಲ್ಲಿ ಸರಣಿ ಜಯಿಸಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ 123 ರನ್‌ ಹಿನ್ನಡೆ ಅನುಭವಿಸಿದ್ದ ಪಾಕ್‌ ಗೆಲುವಿಗೆ 351 ರನ್‌ ಗುರಿ ಪಡೆದಿತ್ತು. 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 73 ರನ್‌ ಗಳಿಸಿದ್ದ ತಂಡ ಶುಕ್ರವಾರ 235 ರನ್‌ಗೆ ಆಲೌಟ್‌ ಆಯಿತು. ಇಮಾಮ್‌-ಉಲ್‌-ಹಕ್‌(70) ಹಾಗೂ ನಾಯಕ ಬಾಬರ್‌ ಆಜಂ(55) ಹೋರಾಟ ವ್ಯರ್ಥವಾಯಿತು. ನೇಥನ್‌ ಲಯನ್‌ 5, ಪ್ಯಾಟ್‌ ಕಮಿನ್ಸ್‌ 3 ವಿಕೆಟ್‌ ಕಿತ್ತರು. ಕಮಿನ್ಸ್‌ ಪಂದ್ಯಶ್ರೇಷ್ಠ, ಉಸ್ಮಾನ್‌ ಖವಾಜ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ ಮೊದಲ ಪಂದ್ಯ ನೀರಸ ಡ್ರಾ ಆಗಿದ್ದರೆ, 2ನೇ ಪಂದ್ಯವನ್ನು ಪಾಕಿಸ್ತಾನ 2 ದಿನ ಹೋರಾಟ ನಡೆಸಿ ಡ್ರಾ ಮಾಡಿಕೊಂಡಿತ್ತು.

2011ರ ಬಳಿಕ ಏಷ್ಯಾ ನೆಲದಲ್ಲಿ ಆಸೀಸ್‌ಗೆ ಮೊದಲ ಸರಣಿ ಜಯ: ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 2011ರ ಬಳಿಕ ಇದುವರೆಗೂ ಏಷ್ಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಯಶಸ್ವಿಯಾಗಿರಲಿಲ್ಲ. ಆದರೆ ಇದೀಗ ಪಾಕಿಸ್ತಾ ಎದುರು ಕೊನೆಯ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಬರೋಬ್ಬರಿ ಒಂದು ದಶಕದ ಬಳಿಕ ಏಷ್ಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕಾಂಗರೂ ಪಡೆ ಯಶಸ್ವಿಯಾಗಿದೆ

Scroll to load tweet…

ಸ್ಕೋರ್‌: 
ಆಸ್ಪ್ರೇಲಿಯಾ 391/10 ಮತ್ತು 227/3 ಡಿಕ್ಲೇರ್, 
ಪಾಕಿಸ್ತಾನ 268/10 ಮತ್ತು 235/10
(ಇಮಾಮ್‌ 70, ಆಜಂ 55, ಲಯನ್‌ 5-83)

ಮಹಿಳಾ ವಿಶ್ವಕಪ್‌: 7ನೇ ಪಂದ್ಯದಲ್ಲೂ ಗೆದ್ದ ಆಸೀಸ್‌

ವೆಲ್ಲಿಂಗ್ಟನ್‌: ದಾಖಲೆಯ 6 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ, 2022ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ 7ನೇ ಪಂದ್ಯದಲ್ಲೂ ಜಯ ಸಾಧಿಸಿದ್ದು, ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧದ ಮಳೆ ಪೀಡಿತ ಪಂದ್ಯದಲ್ಲಿ ಆಸೀಸ್‌ 5 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. 

ICC Women's World Cup: ದಕ್ಷಿಣ ಆಫ್ರಿಕಾ ಎದುರು ಗೆದ್ದರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ

ಬಾಂಗ್ಲಾ ಮೊದಲು ಬ್ಯಾಟ್‌ ಮಾಡಿ 43 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 135 ರನ್‌ ಕಲೆ ಹಾಕಿತು. ಲತಾ ಮೊಂಡಲ್‌ 33 ರನ್‌ ಗಳಿಸಿದರು. ಸುಲಭ ಗುರಿ ಬೆನ್ನತ್ತಿದ ಆಸೀಸ್‌ 32.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. 41 ರನ್‌ಗೆ 4 ವಿಕೆಟ್‌ ಕಳೆದುಕೊಂಡರೂ ಬೆಥ್‌ ಮೂನಿ(ಔಟಾಗದೆ 66) ತಂಡವನ್ನು ಗುರಿ ತಲುಪಿಸಿದರು.

3ನೇ ಟೆಸ್ಟ್‌: 204ಕ್ಕೆ ಇಂಗ್ಲೆಂಡ್‌ ಅಲೌಟ್‌

ಸೇಂಟ್‌ ಜಾಜ್‌ರ್‍(ಗ್ರೇನಡಾ): ವೆಸ್ಟ್‌ಇಂಡೀಸ್‌ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಕುಸಿದ ಇಂಗ್ಲೆಂಡ್‌, 3ನೇ ಹಾಗೂ ಕೊನೆ ಟೆಸ್ಟ್‌ನಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ. ಮೊದಲ ದಿನ ಇಂಗ್ಲೆಂಡ್‌ ಕೇವಲ 204 ರನ್‌ ಗಳಿಸಿ ಆಲೌಟಾಯಿತು. ಅಗ್ರ 7 ಬ್ಯಾಟರ್‌ಗಳ ಪೈಕಿ ಅಲೆಕ್ಸ್‌ ಲೀಸ್‌(31) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ನಾಯಕ ಜೋ ರೂಟ್‌, ಬೇರ್‌ಸ್ಟೋವ್‌ ಶೂನ್ಯ ಸುತ್ತಿದರು. 53ಕ್ಕೆ 6 ವಿಕೆಟ್‌ ಕಳೆದುಕೊಂಡ ತಂಡಕ್ಕೆ ಬಾಲಂಗೋಚಿಗಳು ಆಸರೆಯಾದರು. 114ಕ್ಕೆ 9 ವಿಕೆಟ್‌ ಕಳೆದುಕೊಂಡರೂ ಕೊನೆ ವಿಕೆಟ್‌ಗೆ ಜ್ಯಾಕ್‌ ಲೀಚ್‌(ಔಟಾಗದೆ 41), ಸಕೀಬ್‌ ಮಹ್ಮೂದ್‌(49) ಸೇರಿ 90 ರನ್‌ ಜೊತೆಯಾಟವಾಡಿದರು.

Scroll to load tweet…