ಮೈದಾನದ ಕಾಮಗಾರಿ ಪರಿಶೀಲಿಸಿದ ಅಧ್ಯಕ್ಷ ರೋಜರ್‌ ಬಿನ್ನಿ| ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌ ಮಾಹಿತಿ| ಗದಗ ಜಿಲ್ಲೆಯಲ್ಲಿ ಈಗಾಗಲೇ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಅಂತಿಮ| ಇನ್ನೆರಡು ವರ್ಷದಲ್ಲಿ ಕ್ರಿಕೆಟ್‌ ಆಯೋಜಿಸುವ ವ್ಯವಸ್ಥೆ| ಕಾರವಾರದಲ್ಲಿ ಪ್ರಾಥಮಿಕವಾಗಿ ಸ್ಥಳ ಗುರುತಿಸಲಾಗಿದ್ದು, ಅಂತಿಮವಾಗಿ ನೋಂದಣಿ ಆಗಬೇಕಿದೆ| 

ಹುಬ್ಬಳ್ಳಿ(ಮಾ.04): ಕೆಎಸ್‌ಸಿಎ ಅಧ್ಯಕ್ಷರಾದ ಬಳಿಕ ಬುಧವಾರ ಮೊದಲ ಬಾರಿಗೆ ಹುಬ್ಬಳ್ಳಿ ರಾಜನಗರದ ಮೈದಾನಕ್ಕೆ ಭೇಟಿ ನೀಡಿದ ರೋಜರ್‌ ಬಿನ್ನಿ ಅವರು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಮುಂದಿನ ಆರು ತಿಂಗಳಲ್ಲಿ ಪೆವಿಲಿಯನ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿ​ದ​ರು. ಮೈದಾನದಲ್ಲಿ ನಡೆಯುತ್ತಿರುವ ಪೆವಿಲಿಯನ್‌, ಜಿಮ್‌, ಪ್ರೇಕ್ಷಕರ ಗ್ಯಾಲರಿ ಸೇರಿ ಇತರ ಕಾಮಗಾರಿಗಳ ಬಗ್ಗೆ ಅವರು ಗುತ್ತಿಗೆದಾರರು, ಧಾರವಾಡ ವಲಯದ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌, 2015-16ರಿಂದ . 25 ಕೋಟಿ ಮೊತ್ತದಲ್ಲಿ ಹುಬ್ಬಳ್ಳಿಯಲ್ಲಿ ಕಾಮಗಾರಿಗಳು ಆರಂಭವಾಗಿದ್ದವು. ಬಿಸಿಸಿಐನಿಂದ ಸೂಕ್ತ ಸಮಯದಲ್ಲಿ ಬರಬೇಕಾದ ಅನುದಾನ ಸಮಸ್ಯೆ, ಲೋಧಾ ಶಿಫಾರಸುಗಳ ಪಾಲನೆ ಸೇರಿ ಇತರೆ ಕಾರಣದಿಂದ ವಿಳಂಬವಾಗಿದೆ. ಕಳೆದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಕಾಮಗಾರಿ ಮತ್ತಷ್ಟುವಿಳಂಬವಾಯಿತು. ಇದೀಗ ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇವೆ. ಅಲ್ಲದೆ ಧಾರವಾಡ ವಲಯ ಸ್ವತಂತ್ರವಾಗಿ ನಿರ್ವಹಣೆ ಆಗುವಂತಾಗಲು ಆದಾಯ ಬರುವಂತೆ ಕೆಎಸ್‌ಸಿಎ ಮೈದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಜಿಮ್‌, ಸ್ವಿಮ್ಮಿಂಗ್‌ ಫäಲ್‌, ಕಾರ್ಯಕ್ರಮ ನಡೆಸುವಂತಾಗಲು ಹಾಲ್‌ಗಳನ್ನು ನಿರ್ಮಿಸಲಾಗುತ್ತಿದೆ. 2ನೇ ಹಂತದ ಕಾಮಗಾರಿಯಲ್ಲಿ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಲು ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಅಹಮದಾಬಾದ್ ಟೆಸ್ಟ್; ಮತ್ತೆ ಮಿಂಚಿದ ಅಕ್ಷರ್ ಪಟೇಲ್‌

ಸ್ಥಳೀಯವಾಗಿ ಮಹಿಳಾ ಕ್ರಿಕೆಟ್‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ವರ್ಷ ಧಾರವಾಡದಲ್ಲಿ ತರಬೇತಿ ಅಕಾಡೆಮಿ ಸ್ಥಾಪಿಸಲಾಗುವುದು. ಅಲ್ಲದೆ ಪಂದ್ಯಾವಳಿ ಆಯೋಜನೆ ಮೂಲಕ ಪ್ರಾಶಸ್ತ್ಯ ನೀಡಲು ಮುಂದಾಗಲಿದ್ದೇವೆ ಎಂದು ಮೆನನ್‌ ತಿಳಿಸಿದರು.

ಗದಗ ಜಿಲ್ಲೆಯಲ್ಲಿ ಈಗಾಗಲೇ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಅಂತಿಮವಾಗಿದೆ. ಇನ್ನೆರಡು ವರ್ಷದಲ್ಲಿ ಕ್ರಿಕೆಟ್‌ ಆಯೋಜಿಸುವ ವ್ಯವಸ್ಥೆ ಮಾಡಲಾಗುವುದು. ಕಾರವಾರದಲ್ಲಿ ಪ್ರಾಥಮಿಕವಾಗಿ ಸ್ಥಳ ಗುರುತಿಸಲಾಗಿದ್ದು, ಅಂತಿಮವಾಗಿ ನೋಂದಣಿ ಆಗಬೇಕಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಸ್‌ಸಿಎ ಉಪಾಧ್ಯಕ್ಷ ಜೆ. ಅಭಿರಾಮ್‌, ವ್ಯವಸ್ಥಾಪಕ ಮಂಡಳಿ ಸದಸ್ಯ ತಿಲಕ್‌ ನಾಯ್ಡು, ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ, ಸಂಚಾಲಕ ಅನಿವಾಶ ಪೋತದಾರ ಸೇರಿ ಇತರರಿದ್ದರು.

ಕೆಪಿಎಲ್‌ ಆಯೋಜನೆಗೆ ಚಿಂತನೆ 

ಅಂತರ್‌ ಟೂರ್ನಿಗಳ ಕುರಿತು ಬಿಸಿಸಿಐ ವೇಳಾಪಟ್ಟಿ ಗಮನಿಸಿ ಈ ವರ್ಷ ಕೆಪಿಎಲ್‌ (ಕರ್ನಾಟಕ ಪ್ರಿಮಿಯರ್‌ ಲೀಗ್‌) ಪಂದ್ಯಾವಳಿ ಆಯೋಜಿಸುವ ಚಿಂತನೆ ನಡೆಸಲಿದ್ದೇವೆ. ಮೈದಾನಗಳ ಲಭ್ಯತೆ ಕೂಡ ಅಗತ್ಯ. ಫ್ಲಡ್‌ಲೈಟ್‌ ವ್ಯವಸ್ಥೆ ಇರುವುದರಿಂದ ಹುಬ್ಬಳ್ಳಿಯಲ್ಲಿ ಪಂದ್ಯಾವಳಿ ನಡೆಸಲು ಯಾವುದೇ ಸಮಸ್ಯೆ ಆಗಲಾರದು ಎಂದು ಸಂತೋಷ ಮೆನನ್‌ ತಿಳಿಸಿದರು.