* ಇಂದು ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಲಿದೆ* ಈಗಾಗಲೇ ತಂಡ ಅಂತಿಮಗೊಂಡಿದ್ದು, ಪ್ರಕಟಣೆಯಷ್ಟೇ ಬಾಕಿಯಿದೆ ಎನ್ನಲಾಗುತ್ತಿದೆ* ಯಾರಿಗೆಲ್ಲಾ ಸಿಗಲಿದೆ ಚಾನ್ಸ್‌ ಎನ್ನುವ ಕುತೂಹಲ ಜೋರಾಗಿದೆ

ನವದೆಹಲಿ(ಸೆ.08): ಐಸಿಸಿ ಟಿ20 ವಿಶ್ವಕಪ್‌ಗೆ ಬುಧವಾರ ಭಾರತ ತಂಡ ಪ್ರಕಟಗೊಳ್ಳಲಿದೆ. ಈಗಾಗಲೇ 15 ಸದಸ್ಯರ ಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸೆ.10 ತಂಡಗಳನ್ನು ಪ್ರಕಟಿಸಲು ಕೊನೆ ದಿನವಾಗಿದೆ.

15 ಸದಸ್ಯರ ಜೊತೆಗೆ ಮೀಸಲು ಆಟಗಾರರ ಆಯ್ಕೆಯೂ ನಡೆದಿದೆ. ವಿರಾಟ್‌ ಕೊಹ್ಲಿ ನೇತೃತ್ವದ ತಂಡದಲ್ಲಿ ಕನಿಷ್ಠ 9-10 ಆಟಗಾರರು ಸಹಜವಾಗಿಯೇ ಸ್ಥಾನ ಪಡೆಯಲಿದ್ದು, ಇನ್ನುಳಿದ 5-6 ಸ್ಥಾನಗಳಿಗೆ ಹಲವು ಆಟಗಾರರ ನಡುವೆ ಪೈಪೋಟಿ ಇದೆ. ಕೆ.ಎಲ್‌.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಮೊದಲ ಆಯ್ಕೆಯ ಆರಂಭಿಕರಾಗಿದ್ದು, ಮೀಸಲು ಆರಂಭಿಕರ ಸ್ಥಾನ ಪೃಥ್ವಿ ಶಾ, ಶಿಖರ್‌ ಧವನ್‌ಗೆ ಸಿಗಬಹುದು. ಒಂದೊಮ್ಮೆ ರೋಹಿತ್‌ ಜೊತೆ ಕೊಹ್ಲಿಯೇ ಇನ್ನಿಂಗ್ಸ್‌ ಆರಂಭಿಸಲು ನಿರ್ಧರಿಸಿದರೆ ಆಗ ತಂಡದ ಸಂಯೋಜನೆಯಲ್ಲಿ ಬದಲಾವಣೆ ಆಗಲಿದೆ.

ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ಯಜುವೇಂದ್ರ ಚಹಲ್‌ ಹಾಗೂ ಭುವನೇಶ್ವರ್‌ ಕುಮಾರ್‌ ಸ್ಥಾನ ಪಡೆಯುವುದು ನಿಶ್ಚಿತ. ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌ಗೆ ಅಂತಿಮ 15ರಲ್ಲಿ ಸ್ಥಾನ ಗಳಿಸುವ ಸಾಧ್ಯತೆ ಹೆಚ್ಚು.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಯ್ಕೆ; ಪ್ರಕಟಣೆಯಷ್ಟೇ ಬಾಕಿ..!

ಇನ್ನು ವಾಷಿಂಗ್ಟನ್‌ ಸುಂದರ್‌ ಗಾಯದಿಂದ ಚೇತರಿಸಿಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆ ಸಹ ಇದೆ. ಅವರು ಹೊರಬಿದ್ದರೆ ವರುಣ್‌ ಚಕ್ರವರ್ತಿ ಇಲ್ಲವೇ ಅನುಭವಿ ಆರ್‌.ಅಶ್ವಿನ್‌ ಆಯ್ಕೆಯಾಗಬಹುದು. ಮಯಾಂಕ್‌ ಅಗರ್‌ವಾಲ್‌, ರಾಹುಲ್‌ ಚಹರ್‌, ಪ್ರಸಿದ್‌್ಧ ಕೃಷ್ಣ, ಸಂಜು ಸ್ಯಾಮ್ಸನ್‌, ಚೇತನ್‌ ಸಕಾರಿಯಾ, ಮನೀಶ್‌ ಪಾಂಡೆ, ಕೃನಾಲ್‌ ಪಾಂಡ್ಯ, ಮೊಹಮದ್‌ ಸಿರಾಜ್‌, ಉಮೇಶ್‌ ಯಾದವ್‌ ಹೀಗೆ ಮೀಸಲು ಪಟ್ಟಿಯಲ್ಲಿ ಸ್ಥಾನ ಪಡೆಯಬಹುದಾದ ಆಟಗಾರರ ಪಟ್ಟಿಯೂ ದೊಡ್ಡದಿದೆ.

ಸಂಭವನೀಯ ಆಟಗಾರರ ಪಟ್ಟಿ: ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ(ನಾಯಕ), ಸೂರ್ಯಕುಮಾರ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಹಲ್‌, ಶಾರ್ದೂಲ್‌ ಠಾಕೂರ್‌, ಇಶಾನ್‌ ಕಿಶನ್‌, ಭುವನೇಶ್ವರ್‌ ಕುಮಾರ್‌, ಶಿಖರ್‌ ಧವನ್‌.

ಮೀಸಲು ಆಟಗಾರರು(ನಿರೀಕ್ಷಿತ): ಪೃಥ್ವಿ ಶಾ, ವಾಷಿಂಗ್ಟನ್‌ ಸುಂದರ್‌, ವರುಣ್‌ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್‌, ದೀಪಕ್‌ ಚಹರ್‌, ರಾಹುಲ್‌ ಚಹರ್‌, ಮೊಹಮದ್‌ ಸಿರಾಜ್‌, ಮಯಾಂಕ್‌ ಅಗರ್‌ವಾಲ್‌, ಕೃನಾಲ್‌ ಪಾಂಡ್ಯ.