ವಿಕೆಟ್ ಕೀಪಿಂಗ್ ಬ್ಯಾಟ್ಸ್‌ಮನ್ ಆಗಿ ಯಾರೂ ಮಾಡದ ದಾಖಲೆ ನಿರ್ಮಿಸಿದ ಕೆ.ಎಲ್.ರಾಹುಲ್..!
ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ನ್ಯೂಜಿಲೆಂಡ್ ಸರಣಿಯಲ್ಲೂ ಅಬ್ಬರಿಸುತ್ತಿದ್ದಾರೆ. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ರಾಹುಲ್ ಇದೀಗ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರಾಹುಲ್ ಬರೆದ ವಿಶ್ವದಾಖಲೆ ವಿವರ ಇಲ್ಲಿದೆ.
ಆಕ್ಲೆಂಡ್(ಜ.26): ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯದಲ್ಲೂ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾದ ಗೆಲುವಿನ ರೂವಾರಿ ಎನಿಸಿದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಈ ವರೆಗೆ ಯಾರೂ ಮಾಡದ ದಾಖಲೆ ರಾಹುಲ್ ಪಾಲಾಗಿದೆ.
ಹೌದು, ಕೆ.ಎಲ್. ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಅರ್ಧಶತಕ ಬಾರಿಸುವ ಹೊಸ ದಾಖಲೆ ಬರೆದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ತಾವಾಡಿದ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ, ಚುಟುಕು ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೆ ರಾಹುಲ್ ಪಾತ್ರರಾಗಿದ್ದಾರೆ. ವಿಕೆಟ್ ಕೀಪರ್ ಒಬ್ಬ ತಾವಾಡಿದ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದೇ ಮೊದಲು ಎನಿಸಿದೆ. ರಾಹುಲ್ ಆಕ್ಲೆಂಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 56 ರನ್ ಬಾರಿಸಿದ್ದರು, ಇದೀಗ ಅದೇ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲೂ ಅಜೇಯ 57 ರನ್ ಬಾರಿಸುವ ಮೂಲಕ ಅಪರೂಪದ ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಗಣರಾಜ್ಯೋತ್ಸವಕ್ಕೆ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ
ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ರಿಷಭ್ ಪಂತ್ ಅವರನ್ನು ತಂಡದಿಂದ ಕೈಬಿಟ್ಟು ರಾಹುಲ್‌ಗೆ ವಿಕೆಟ್ ಕೀಪಿಂಗ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಪಾತ್ರ ನಿಭಾಯಿಸುತ್ತಿರುವ ರಾಹುಲ್ ಕೀಪಿಂಗ್ ಹಾಗೆಯೇ ಬ್ಯಾಟಿಂಗ್‌ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ವೃತ್ತಿಜೀವನದ ಅಧ್ಬುತ ಫಾರ್ಮ್‌ನಲ್ಲಿರುವ ರಾಹುಲ್ ಕಳೆದ 5 ಇನಿಂಗ್ಸ್‌ಗಳಲ್ಲಿ 4 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಕೆ.ಎಲ್. ರಾಹುಲ್-ಶ್ರೇಯಸ್ ಅಯ್ಯರ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಸುಲಭ ಜಯ ದಾಖಲಿಸಿತು. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ.